Advertisement

‘ಮಹಾ’ಮಳೆಗೆ ಕಲಬುರಗಿಯಲ್ಲಿ ನೆರೆ

10:18 AM Aug 09, 2019 | Naveen |

ಕಲಬುರಗಿ: ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಉಜನಿ ಹಾಗೂ ವೀರಾ ಜಲಾಶಯದಿಂದ ಹರಿ ಬಿಡಲಾದ ನೀರಿನಿಂದ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ತೀರದ 26 ಗ್ರಾಮಗಳಲ್ಲಿನ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

Advertisement

ಕಳೆದ ವಾರದಿಂದ ಜಿಲ್ಲೆಯಲ್ಲಿ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಸ್ವಲ್ಪ ತಗ್ಗಿದಾದರೂ ಜಿಲ್ಲೆಯ ಯಾವುದೇ ಹಳ್ಳ-ಕೊಳ್ಳ-ಕೆರೆ-ಕಟ್ಟೆಗಳು ಭರ್ತಿ ಯಾಗಿಲ್ಲ. ಆದರೆ ಮಹಾರಾಷ್ಟ್ರದಿಂದ ನೀರು ಬಿಟ್ಟಿದ್ದರಿಂದ ಭೀಮಾ ನದಿ ಉಕ್ಕಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಯ ಭೀಮಾ ನದಿಗೆ ಪ್ರತಿದಿನ 2.74 ಲಕ್ಷ ಕ್ಯೂಸೆಕ್‌ ನೀರನ್ನು ಭೀಮಾ ನದಿಗೆ ಹರಿಬಿಟ್ಟಿರುವ ಕಾರಣ ಜಿಲ್ಲೆಯ ಕಲಬುರಗಿ, ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ.ಭೀಮಾ ನದಿ ದಡದಲ್ಲಿ ಅಫ‌ಜಲಪುರ ತಾಲೂಕಿನ 32 ಗ್ರಾಮಗಳು, ಜೇವರ್ಗಿ ತಾಲೂಕಿನ 40, ಚಿತ್ತಾಪುರ 12 ಹಾಗೂ ಕಲಬುರಗಿ ತಾಲೂಕಿನ 12 ಗ್ರಾಮಗಳು ಸೇರಿ ಒಟ್ಟಾರೆ 99 ಹಳ್ಳಿಗಳು ಬರುತ್ತವೆ. ಆದರೆ ಇವುಗಳ ಪೈಕಿ 26 ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಸನ್ನದ್ಧಗೊಂಡಿದೆ. ಈ ಹಿಂದೆ 2006 ಮತ್ತು 2009ರಲ್ಲೂ ಇದೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂಪರ್ಕ ಕಡಿತ: ಭೀಮಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಭೀಮಾ ನದಿಗೆ ಕಟ್ಟಿರುವ ಘತ್ತರಗಾ, ದೇವಲಗಾಣಗಾಪುರ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದರಿಂದ ಜೇವರ್ಗಿ ತಾಲೂಕಿನ ಕೆಲವು ಹಾಗೂ ಅಫ‌ಜಲಪುರ ತಾಲೂಕಿನ ಕೆಲ ಹಳ್ಳಿಗಳ ಸಂಪರ್ಕ ಕಡಿತವಾಗಿದೆ.

ಅಫ‌ಜಲಪುರ ತಾಲೂಕಿನ ಮಣ್ಣೂರಿನ ಪ್ರಸಿದ್ಧ ಯಲ್ಲಮ್ಮ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ಇತ್ತೀಚೆಯ ವರೆಗೆ ಒಣಗಿದ್ದ ಭೀಮಾ ನದಿಗೆ ಒಮ್ಮೆಲೆ ಪ್ರವಾಹದ ನೀರು ಬಂದಿದ್ದರಿಂದ ನದಿ ತೀರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನದಿ ತೀರದಲ್ಲಿದ್ದ ಮೋಟಾರುಗಳನ್ನು ರೈತರು ಜೀವದ ಹಂಗು ತೊರೆದು ಮೇಲೆತ್ತುತ್ತಿರುವುದು ಕೆಲವೆಡೆ ಕಂಡು ಬರುತ್ತಿದೆ.

Advertisement

ಸ್ಥಳಾಂತರಕ್ಕೆ ಸೂಚನೆ: ಭೀಮಾ ನದಿ ಪಾತ್ರದ 26 ಹಳ್ಳಿಗಳ ಗ್ರಾಮಸ್ಥರು ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಈ ಗ್ರಾಮಗಳ ಗ್ರಾಮಸ್ಥರನ್ನು ಕೂಡಲೇ ಸ್ಥಳಾಂತರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಭೀಮಾ ನದಿ ಪ್ರವಾಹವನ್ನು ದೇವಲ್ ಗಾಣಗಾಪುರ, ಘತ್ತರಗಾ, ಸೊನ್ನ ಏತ ನೀರಾವರಿ ಜಲಾಶಯ ವೀಕ್ಷಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಪ್ರತಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸ್‌, ಅಗ್ನಿಶಾಮಕ, ಜೆಸ್ಕಾಂ ಅಧಿಕಾರಿಗಳು ಸೇರಿದಂತೆ ರಕ್ಷಣಾ ತಂಡಗಳು ಗ್ರಾಮದಲ್ಲಿ ಠಿಕಾಣಿ ಹೂಡಲು ತಿಳಿಸಲಾಗಿದೆ. ಪ್ರಥಮ ಚಿಕಿತ್ಸೆ ನೀಡಲು ವೈದ್ಯಕೀಯ ತಂಡ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರಗಳನ್ನು ತೆಗೆಯುವಂತೆ ತಹಶೀಲ್ದಾರ್‌ಗಳಿಗೆ ಮತ್ತು ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ನೇಮಕ: ಪ್ರವಾಹ ಪರಿಸ್ಥಿತಿ ಎದುರಿಸಲು ಹಾಗೂ ಸಂತ್ರಸ್ತರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸಂರಕ್ಷಣೆ, ಪರಿಹಾರ (ಖಜ?ಛಿOಜ ಚಿಟಿಜ ಖಜಟåಜಜಿ) ನಿರ್ವಹಣೆಗಾಗಿ ಕೆಳಕಂಡ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.

ತಾಲೂಕುಗಳಿಗೆ ನೇಮಕವಾದ ನೋಡಲ್ ಅಧಿಕಾರಿಗಳು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜನ ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸುವ ಕುರಿತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಲ್ಲದೇ ಸಂಬಂಧಪಟ್ಟ ತಾಲೂಕಿನಲ್ಲಿ ತೆರೆಯಲಾಗುವ ಪರಿಹಾರ ಕೇಂದ್ರಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ. ಕಲಬುರಗಿ ತಾಲೂಕಿಗೆ ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ-9480695212, ಅಫಜಲಪುರ ತಾಲೂಕಿಗೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಸತೀಶ-7349346847, ಜೇವರ್ಗಿ ತಾಲೂಕಿಗೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ-8277931500, ಚಿತ್ತಾಪುರ ತಾಲೂಕಿಗೆ ಕಲಬುರಗಿ ನಗರಾಭಿವೃದ್ಧಿ ಪಾಧ್ರಿಕಾರದ ಆಯುಕ್ತ ರಾಚಪ್ಪ-9480056951 ಅವರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next