Advertisement

ಪಾಲಿಕೆ ಸಿಬ್ಬಂದಿ-ಪೌರ ಕಾರ್ಮಿಕರ ಆರೋಗ್ಯ ತಪಾಸಣೆ

03:38 PM Apr 11, 2020 | Naveen |

ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿನ ಭೀತಿ ನಡುವೆ ಕರ್ತವ್ಯದಲ್ಲಿ ತೊಡಗಿರುವ ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಆರಂಭಿಸಲಾಗಿದೆ. ನಗರದ ಇಂದಿರಾ ಗಾಂಧಿ ಸ್ಮಾರಕ ಭವನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಯುನೈಟೆಡ್‌ ಆಸ್ಪತ್ರೆ, ಬಿಯಿಂಗ್‌ ಹುಮನ್‌ ಟ್ರಸ್ಟ್‌ ಸಹಯೋಗದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಶುಕ್ರವಾರ 200 ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

Advertisement

ಕೊರೊನಾ ತಲ್ಲಣವನ್ನು ಲೆಕ್ಕಿಸದೇ ಪಾಲಿಕೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರಾದ್ಯಂತ ಸ್ವಚ್ಛಗೊಳಿಸುವುದು, ಕಸ ಸಂಗ್ರಹ, ಚರಂಡಿ ಸ್ವತ್ಛತೆ, ತ್ಯಾಜ್ಯ ವಿಲೇವಾರಿ ಮಾತ್ರವಲ್ಲದೇ ಕೊರೊನಾ ಸೋಂಕಿತರ ವಾಸವಿರುವ ಪ್ರದೇಶ ಹಾಗೂ ಕ್ವಾರಂಟೈನ್‌ ಮನೆಗಳ ಸುತ್ತಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು,
ಕಸ ವಿಲೇವಾರಿ ವಾಹನ ಚಾಲಕರು, ಕ್ಲಿನರ್‌ ಗಳು ಸೇರಿದಂತೆ ಒಟ್ಟಾರೆ 1300 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ಹಾಗೂ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿಗೂ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಪರಿಸರ ಅಭಿಯಂತರರಾದ ಮುನಾಫ್‌ ಪಟೇಲ್‌, ಪರಿಸರ ಅಭಿಯಂತರ ಚೇತನ್‌ ನಾಯಕ್‌, ಆರೋಗ್ಯ ನಿರೀಕ್ಷಕ ದೀಪಕ್‌ ಚವ್ಹಾಣ, ಬಿಯಿಂಗ್‌ ಹುಮನ್‌ ಟ್ರಸ್ಟ್‌ ಅಧ್ಯಕ್ಷ ಸಾದಿಕ್‌ ಅಲಿ ದೇಶಮುಖ, ಉಪಾಧ್ಯಕ್ಷ ಅಭಿಷೇಕ ಕಾಂಬ್ಳೆ, ನವೀನ್‌ಕುಮಾರ ಮತ್ತಿತರರು ಇದ್ದರು.

ಕ್ವಾರಂಟೈನ್‌ ಮನೆಗಳಲ್ಲಿ ಔಷಧಿ: ಕೊರೊನಾ ನಿಯಂತ್ರಿಸಲು ಶಂಕಿತ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‌ ಮಾಡಲಾಗುತ್ತಿದೆ. ನಗರದಲ್ಲಿ 70 ಕ್ವಾರಂಟೈನ್‌ ಮನೆಗಳಿದ್ದು, ಮನೆಗಳು
ಮತ್ತು ಸುತ್ತ-ಮುತ್ತಲಿನ ಪ್ರದೇಶದಲ್ಲಿ ಪೌರ ಕಾರ್ಮಿಕರು ಔಷಧಿ ಸಿಂಪಡಿಸುತ್ತಿದ್ದಾರೆ. ಅಲ್ಲದೇ, ಆಯಾ ಮನೆಗಳಿಂದ ಕಸ ಸಂಗ್ರಹವನ್ನು ಪೌರ ಕಾರ್ಮಿಕರು ಮಾಡುತ್ತಿದ್ದಾರೆ. ಕ್ವಾರಂಟೈನ್‌ ಪ್ರದೇಶದಲ್ಲಿ ಕಾರ್ಯ ನಿರ್ವಹಣೆಗೆ ಹತ್ತು ಕಾರ್ಮಿಕರನ್ನು ನಿಯೋಜಿಸಲಾಗಿದ್ದು, ರಕ್ಷಣೆಗೆ ಅಗತ್ಯವಾದ ಉಡುಪು, ಗ್ಲೌಸ್‌, ಶೂ, ಮಾಸ್ಕ್ ಮತ್ತು ವಿಶೇಷ ಕನ್ನಡಕ ಹಾಗೂ ಸ್ಯಾನಿಟೈಜರ್‌ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next