Advertisement

ಗುರುನಾನಕ ಜಯಂತಿ: ಭವ್ಯ ಮೆರವಣಿಗೆ

10:10 AM Aug 23, 2019 | Naveen |

ಕಲಬುರಗಿ: ಸಿಖ್‌ ಧರ್ಮಗುರು ಗುರುನಾನಕರ 550ನೇ ಜಯಂತಿ ಆಚರಣೆ ನಿಮಿತ್ತ ನಗರದಲ್ಲಿ ಸಿಖ್‌ ಸಮುದಾಯದವರಿಂದ ಮೊದಲ ಬಾರಿಗೆ ‘ಪ್ರಕಾಶ್‌ ಪುರಬ್‌ ಯಾತ್ರೆ’ ಅಂಗವಾಗಿ ವಿಜೃಂಭಣೆಯ ಮೆರವಣಿಗೆ ನಡೆಯಿತು.

Advertisement

ನಗರದ ಸರಸ್ವತಿ ಗೋಡೌನ್‌ ಪ್ರದೇಶದಲ್ಲಿರುವ ಗುರುದ್ವಾರದಲ್ಲಿ ದಿನಪೂರ್ತಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಸಂಜೆ ಬೀದರ್‌ನಿಂದ ‘ಪ್ರಕಾಶ್‌ ಪುರಬ್‌ ಯಾತ್ರೆ’ ನಗರಕ್ಕೆ ಆಗಮಿಸಿತು. ಆಳಂದ ಮಾರ್ಗವಾಗಿ ಆಗಮಿಸಿದ ಯಾತ್ರೆಯನ್ನು ಸಿಖ್‌ ಮುಖಂಡರು ಸಂತೋಷದಿಂದ ಬರ ಮಾಡಿಕೊಂಡರು. ಯಾತ್ರೆ ಅಂಗವಾಗಿ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಬೃಹತ್‌ ಮೆರವಣಿಗೆ ಜರುಗಿತು.

ನಗರದ ಕಿರಾಣಾ ಬಜಾರ್‌, ಜಗತ್‌ ವೃತ್ತ ಮತ್ತು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಸುತ್ತುವರಿದು ಮರಳಿ ಗುರುದ್ವಾರಕ್ಕೆ ಮೆರವಣಿಗೆ ಸಾಗಿತು. ವಿಶೇಷ ವಾಹನದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ವಾಹನದಲ್ಲಿ ಇರಿಸಲಾಗಿದ್ದ ಗುರುಗ್ರಂಥ ಸಾಹೇಬ್‌ಗ ಧರ್ಮಗುರುಗಳು ಪೂಜೆ ಸಲ್ಲಿಸಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಸಿಖ್‌ ಧರ್ಮದ ಯುವಕರು ಆಕರ್ಷಕ ಕತ್ತಿ ವರಸೆ ಪ್ರದರ್ಶಿಸಿದರು. ಅಲ್ಲದೇ, ಮೆರವಣಿಗೆಯುದ್ದಕ್ಕೂ ಖಡ್ಗ, ಕತ್ತಿಗಳನ್ನು ಹಿಡಿದು ಸಂಚರಿಸಿದರು.

ಕುದುರೆಗಳ ಸವಾರಿ, ಒಂಟೆಗಳ ಸವಾರಿ, ಧ್ವಜಧಾರಿ ಯುವಕರು ಮತ್ತು ಯುವತಿಯರು ಪಾಲ್ಗೊಂಡು ಪ್ರಾರ್ಥನೆ ಮಾಡಿದರು. ಪುರುಷರು ಕೇಸರಿ ಪಗಡಿ ಹಾಗೂ ಉಡುಪು ಧರಿಸಿದ್ದರೆ, ಮಹಿಳೆಯರು ಬಿಳಿ ಬಟ್ಟೆ ಹಾಗೂ ಕೇಸರಿ ಬಣ್ಣದ ಚುನ್ನಿ ಧರಿಸಿದ್ದು ಗಮನ ಸೆಳೆಯಿತು.

Advertisement

ಮೆರವಣಿಗೆ ಆರಂಭವಾಗುವ ಗಂಜ್‌ನ ಮುಖ್ಯ ರಸ್ತೆಯ ಪಕ್ಕದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಡಿಸಿಪಿ ಡಿ.ಕಿಶೋರಬಾಬು, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ, ಎನ್‌ಇಕೆಆರ್‌ಟಿಸಿ ಮಾಜಿ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌ ಅವರನ್ನು ಸಿಖ್‌ ಸಮುದಾಯದಿಂದ ಸನ್ಮಾನಿಸಲಾಯಿತು.

ಹಿಂದೂ, ಮುಸ್ಲಿಂ, ಸಿಖ್‌, ಇಸಾಯಿ, ಕ್ರಿಸ್ತ ಧರ್ಮಗಳೆಲ್ಲ ಮನುಕುಲಕ್ಕೆ ಒಳಿತನ್ನೇ ಬಯಸಿವೆ. ಶತಮಾನಗಳ ಹಿಂದೆ ಲೋಕಕ್ಕೆ ಶಾಂತಿ ಮಂತ್ರವನ್ನು ಗುರುನಾನಕರು ನೀಡಿದ್ದರು. ಅವರ ವಿಚಾರಗಳ ಬೆಳಕಿನಲ್ಲಿ ಸಿಖ್‌ ಸಮುದಾಯ ಸಾಗುತ್ತಿದೆ ಎಂದು ಮುಖಂಡ ಜಸ್ವೀರ್‌ ಸಿಂಗ್‌ ಹೇಳಿದರು.

ಮುಖಂಡರಾದ ಸುರೇಂದರ್‌ಪಾಲ ಸಿಂಗ್‌ ಭಾಟಿಯಾ, ಅಮೃತ್‌ ಸಿಂಗ್‌, ಗುರ್ಮೀತ್‌ಸಿಂಗ್‌, ಸತ್ಬೀರ್‌ಸಿಂಗ್‌ ಆನಂದ, ಜಸ್ವೀರ್‌ಸಿಂಗ್‌ ಛಾಬ್ರಾ, ವಿಜಯಕುಮಾರ ಶೇವಲಾನಿ, ರಾಜೇಂದ್ರಸಿಂಗ್‌ ಭಾಟಿಯಾ, ಘನಶಾಮ ನಂದವಾನಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next