Advertisement

ರಾತ್ರಿ 12ಕ್ಕೆ ಹೋಗಿ ಬೆಳಗ್ಗೆ 5ಕ್ಕೆ ಎದ್ದು ಬರೋದು ಗ್ರಾಮ ವಾಸ್ತವ್ಯ

10:18 AM Jun 12, 2019 | Naveen |

ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎನ್ನೋದು ಬರೀ ನಾಟಕ. ಹಿಂದಿನ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲೇ ಇದನ್ನು ನೋಡಿದ್ದೇವೆ. ರಾತ್ರಿ 12ಗಂಟೆಗೆ ಗ್ರಾಮಕ್ಕೆ ಹೋಗಿ ಬೆಳಗಿನ ಜಾವ 5ಗಂಟೆಗೆ ಎದ್ದು ಬರೋದು ಕುಮಾರಸ್ವಾಮಿ ಗ್ರಾಮವಾಸ್ತವ್ಯ ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಲೇವಡಿ ಮಾಡಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ತೀವ್ರ ಬರಗಾಲ ಇದ್ದರೂ ಮಂಡ್ಯ, ಹಾಸನ, ಬೆಂಗಳೂರು ಬಿಟ್ಟು ಸಿಎಂ ಎಚ್‌ಡಿಕೆ ಹೊರಬಂದಿಲ್ಲ. ಬರೀ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ಸಂವಾದ ನಡೆಸೋದು ಆಡಳಿತವಲ್ಲ. ಈಗ ಗ್ರಾಮ ವಾಸ್ತವ್ಯದ ಹೆಸರಲ್ಲಿ ನಾಟಕವಾಡೋಕೆ ಹೋಗಬೇಡಿ. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದಾಗ ಯಾವ ಭರವಸೆ ನೀಡಲಾಗಿತ್ತು. ಯಾವುದನ್ನು ಈಡೇರಿಸಲಾಗಿದೆ ಎನ್ನುವ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲೆಸೆದರು.

ಕಂಪನಿಗಳೊಂದಿಗೆ ಡೀಲಿಂಗ್‌, ರೈತರಿಗೆ ಮೋಸ ಮಾಡೋದು ಸಮ್ಮಿಶ್ರ ಸರ್ಕಾರದ ಕೆಲಸವಾಗಿದೆ. ಚುನಾವಣೆಗೂ ಮುನ್ನ ರೈತರ ಖಾತೆಗೆ ಹಾಕಿದ ಸಾಲ ಮನ್ನಾ ಹಣ ಈಗ ರಿಫಂಡ್‌ ಆಗಿದೆ. ಇದು ಮೋಸದ ಕೃತ್ಯ ಆಗಿದ್ದು ಹೇಗೆ ಎನ್ನುವ ಬಗ್ಗೆ ಸಿಎಂ ಸ್ಪಷ್ಟ ಉತ್ತರ ಕೊಡಬೇಕು. ಸೂಕ್ತ ತನಿಖೆ ನಡೆಸಬೇಕು. ಜಿಂದಾಲ್ ಕಂಪನಿಗೆ ಕಡಿಮೆ ದರಕ್ಕೆ ಭೂಮಿ ಕೊಡುವ ಒಪ್ಪಂದದ ದಾಖಲೆಗಳನ್ನು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.

ಜನಾದೇಶ ಬಿಜೆಪಿ ಪರವಾಗಿದ್ದರೂ ಕಾಂಗ್ರೆಸ್‌ನವರು ಅಧಿಕಾರದ ಲಾಲಸೆಗಾಗಿ 37 ಸ್ಥಾನ ಗೆದ್ದವರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕಿಕೊಳ್ಳುತ್ತಾ ಸರ್ಕಾರ ನಡೆಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪದಲ್ಲಿ ಜೆಡಿಎಸ್‌-ಕಾಂಗ್ರೆಸ್‌ನವರು ತೊಡಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ರಾಹುಲ್ ಗಾಂಧಿಗೆ ದೂರು ಕೊಟ್ಟಿದ್ದಾರೆ. ಸಂಪುಟ ವಿಸ್ತರಣೆ ಸಮಯದಲ್ಲಿ ಮೂವರಿಗೆ ಸಚಿವ ಸ್ಥಾನ ಕೊಟ್ಟು ಸಮಾಧಾನ ಪಡಿಸಿದರೆ, ಆರು ಜನ ಶಾಸಕರು ಅಸಮಾಧಾನ ಹೊರ ಹಾಕಲಿದ್ದಾರೆ. ಪರಸ್ಪರ ಕಚ್ಚಾಡಿಕೊಂಡು ಸಮ್ಮಿಶ್ರ ಸರ್ಕಾರ ತಾನೇ ಬಿದ್ದು ಹೋಗುತ್ತದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗಿದೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅವರಂತ ನಾಯಕರೇ ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಜನತೆ ವಿಸರ್ಜಿಸುವ ಮುನ್ನವೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಗೌರವ ಕಾಪಾಡಿಕೊಳ್ಳಬೇಕೆಂದು ಹೇಳಿದರು.

Advertisement

ಬಿಜೆಪಿ ನಗರಾಧ್ಯಕ್ಷ, ಎಂಎಲ್ಸಿ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಸಕರಾದ ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ಡಾ| ಅವಿನಾಶ ಜಾಧವ, ಮಾಜಿ ಎಂಎಲ್ಸಿಗಳಾದ ಶಶೀಲ ನಮೋಶಿ, ಅಮರನಾಥ ಪಾಟೀಲ, ಬಸವರಾಜ ಇಂಗಿನ್‌ ಇದ್ದರು.

ಧೈರ್ಯವಿದ್ದರೆ ಖರ್ಗೆಯನ್ನೇ ಅಧ್ಯಕ್ಷರನ್ನಾಗಿಸಿ
ಕಾಂಗ್ರೆಸ್‌ ನೆಹರೂ, ಗಾಂಧಿ ಕುಟುಂಬದ ಪಕ್ಷವಾದರೆ, ಜೆಡಿಎಸ್‌ ದೇವೇಗೌಡರ ಅಪ್ಪ-ಮಕ್ಕಳ ಪಕ್ಷ. ಅಲ್ಲಿ ಹೊರಗಿನವರಿಗೆ ಅವಕಾಶವೇ ಸಿಗುವುದಿಲ್ಲ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ತೊರೆದು 15 ದಿನ ಕಳೆದರೂ ಅದನ್ನು ಸ್ವೀಕರಿಸುವ ಶಕ್ತಿ ಕಾಂಗ್ರೆಸ್‌ನಲ್ಲಿ ಇಲ್ಲ. ಧೈರ್ಯವಿದ್ದರೆ ಡಾ| ಮಲ್ಲಿಕಾರ್ಜುನ ಖರ್ಗೆ ಅಥವಾ ಬೇರೆ ಯಾರನ್ನಾದರೂ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿ ನೋಡೋಣ ಎಂದು ಜಗದೀಶ ಶೆಟ್ಟರ್‌ ಸವಾಲು ಹಾಕಿದರು. ಲೋಕಸಭೆ ಚುನಾವಣೆ ಮತ್ತು ಚಿಂಚೋಳಿ ಉಪಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸುವುದಕ್ಕೆ ಬಿಜೆಪಿ ಬದ್ಧವಾಗಿದೆ. ಕಲಬುರಗಿ ರೈಲ್ವೆ ವಿಭಾಗ ಆರಂಭ ಸೇರಿದಂತೆ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳ ಆರಂಭಕ್ಕೆ ಒತ್ತು ಕೊಡುವಂತೆ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಗೆ ಹೇಳಿದ್ದೇವೆ. ಅದೇ ರೀತಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭ ಮತ್ತು ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next