Advertisement

ರೋಗಿಯನ್ನು ಮಾನವೀಯತೆಯಿಂದ ಕಾಣಿ: ಸುಧೀರ

02:47 PM May 03, 2019 | Team Udayavani |

ಕಲಬುರಗಿ: ವೈದ್ಯಕೀಯ ವೃತ್ತಿಯಲ್ಲಿ ಮುಕ್ತ ಮನಸ್ಸಿನೊಂದಿಗೆ ಮಾನವೀಯ ಗುಣ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ವೈದ್ಯರು ರೋಗಿಗಳಿಗೆ ಮಾನವೀಯತೆ ನೆಲೆಯಲ್ಲಿ ಭರವಸೆ ಚಿಕಿತ್ಸೆ ನೀಡಬೇಕೆಂದು ತಮಿಳುನಾಡಿನ ಸೇಲಂನ ವಿನಾಯಕ ಮಿಷನ್ಸ್‌ ಸಂಶೋಧನಾ ಫೌಂಡೇಷನ್‌ ಸ್ವಾಯತ್ತ ವಿಶ್ವವಿದ್ಯಾಲಯ ಕುಲಪತಿ ಡಾ| ಪಿ.ಕೆ. ಸುಧೀರ ಹೇಳಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಸಂಭಾಗಣದಲ್ಲಿ ಗುರುವಾರ ನಡೆದ ಡಾ| ಮಾಲಕರಡ್ಡಿ ಹೋಮಿಯೋಪಥಿಕ್‌ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ವೈದ್ಯ ವೃತ್ತಿ ಜೀವನಕ್ಕೂ ಕಾಲೇಜಿನಲ್ಲಿ ಕಲಿತ ಪಠ್ಯಕ್ಕೂ ತುಂಬಾ ವ್ಯತ್ಯಾಸಗಳಿವೆ. ವೈದ್ಯಕೀಯ ವೃತ್ತಿ ಅಂದುಕೊಂಡಷ್ಟು ಸುಲಭವಾಗಿಲ್ಲ. ಸೋಲೇ ಗೆಲುವಿನ ಮೆಟ್ಟಿಲೆಂದು ಭಾವಿಸಿ ವೃತ್ತಿಯಲ್ಲಿ ಮುನ್ನಡೆಯಬೇಕು. ವೃತ್ತಿಯಲ್ಲಿ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ರೋಗಿಯೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳಲು ಸಂವಹನ ಕೌಶಲ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಯಾರೋ ಹೇಳಿದ್ದನ್ನು ಕೇಳಿ ರೋಗಿಗೆ ಚಿಕಿತ್ಸೆ ಕೊಡಬಾರದು. ಅನುಭವ ಆಧರಿಸಿ ಚಿಕಿತ್ಸೆ ನೀಡಬೇಕು. ತುರ್ತು ಪರಿಸ್ಥಿತಿ ಅರಿತು ರೋಗಿಗೆ ಚಿಕಿತ್ಸೆ ನೀಡುವ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಮಕುಲಪತಿ ಪ್ರೊ| ಜಿ.ಆರ್‌. ನಾಯಕ ಮಾತನಾಡಿ, ಆರೋಗ್ಯ ಕ್ಷೇತ್ರವು ಜಗತ್ತಿನ ಎಲ್ಲ ದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ದರಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ 12ನೇ ಪಂಚ ವಾರ್ಷಿಕ ಯೋಜನೆ ನಂತರ ಆರೋಗ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದ್ದು, ಸಾಕಷ್ಟು ಪ್ರಗತಿ ಕಂಡಿದೆ. ಯುವ ವೈದ್ಯರು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ, ಗ್ರಾಮೀಣ ಭಾಗಗಳಲ್ಲೂ ವೈದ್ಯಕೀಯ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.

Advertisement

ಹೈ.ಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಡಾ| ಮಾಲಕರಡ್ಡಿ ಹೋಮಿಯೋಪಥಿಕ್‌ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ| ಪಿ. ಸಂಪತ್‌ ಕುಮಾರ ಲೋಯಾ ಮಾತನಾಡಿದರು. ಉಪ ಪ್ರಾಚಾರ್ಯ ಡಾ| ಅಶೋಕ ಪಾಟೀಲ ಪದವಿ ಪಡೆದ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ| ನಾಗೇಂದ್ರಪ್ಪ ಮಂಠಾಳೆ, ಸತೀಶ್ಚಂದ್ರ ಹಡಗಲಿಮಠ, ಗಂಗಾಧರ ಎಲಿ, ಅನುರಾಧಾ ದೇಸಾಯಿ, ಅನಿಲಕುಮಾರ ಮರಗೋಳ, ಡಾ| ಎಸ್‌.ಬಿ. ಕಾಮರಡ್ಡಿ, ವೀರಭದ್ರಪ್ಪ ನಂದ್ಯಾಳ, ಉದಯಕುಮಾರ ಚಿಂಚೋಳಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

110 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಹೈ.ಕ ಶಿಕ್ಷಣ ಸಂಸ್ಥೆಯ ಡಾ| ಮಾಲಕರಡ್ಡಿ ಹೋಮಿಯೋಪಥಿಕ್‌ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲ ವಿದ್ಯಾರ್ಥಿಗಳು ಜಗಮಗಿಸುವ ಗೌನು, ಕ್ಯಾಪ್‌ ತೊಟ್ಟು ಸಂಭ್ರಮಪಟ್ಟರು. ಅಧಿಕ ಅಂಕ ಪಡೆದ ರಫಿಯಾ ಸುಲ್ತಾನಾ, ಆಯಿಷಾ ಫಾತಿಮಾ, ಅರ್ಷದ್‌ ಸುಲ್ತಾನ್‌ ಸೇರಿದಂತೆ 110 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭಕ್ಕೂ ಮುನ್ನ ಹಾಗೂ ನಂತರ ವಿದ್ಯಾರ್ಥಿಗಳು ಮಂದಹಾಸ ಬೀರುತ್ತಾ ಓಡಾಡುತ್ತಿದ್ದರು. ಇವರ ಮಧ್ಯೆ ಗೆಳೆಯ, ಗೆಳತಿಯರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಚಿತ್ರಣ ರಾರಾಜಿಸಿತು.

Advertisement

Udayavani is now on Telegram. Click here to join our channel and stay updated with the latest news.

Next