Advertisement

ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ತನಿಖೆ ಪೂರ್ಣ

12:01 PM Dec 23, 2019 | Team Udayavani |

ಕಲಬುರಗಿ: ಜನಾಕ್ರೋಶಕ್ಕೆ ಕಾರಣವಾಗಿದ್ದ ಚಿಂಚೋಳಿ ತಾಲೂಕಿನ ಸುಲೇಪೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತ್ವರಿತವಾಗಿ ಪೂರ್ಣಗೊಳಿಸಿದ್ದು, ದೋಷಾರೋಪ ಪಟ್ಟಿ (ಚಾರ್ಜ್‌ ಶೀಟ್‌)ಯನ್ನು ಎರಡ್ಮೂರು ದಿನಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

Advertisement

ಕಳೆದ ತಿಂಗಳು ಹೈದ್ರಾಬಾದ್‌ನ ಪಶು ವೈದ್ಯೆ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಪೆಟ್ರೋಲ್‌ ಸುರಿದು ಆಕೆಯನ್ನು ಬರ್ಬರವಾಗಿ ಸುಟ್ಟು ಹಾಕಿದ ಪ್ರಕರಣ ದೇಶದಲ್ಲಿ ಆಕ್ರೋಶದ ಕಿಡಿ ಹೊತ್ತಿತ್ತು. ಇದೇ ಹೊತ್ತಲ್ಲಿ ಡಿ.2ರಂದು ಜಿಲ್ಲೆಯ ಸುಲೇಪೇಟ್‌ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಕಾಮುಕ ಯಲ್ಲಪ್ಪ ಎನ್ನುವಾತ ಎಂಟು ವರ್ಷದ ಮಂದಬುದ್ಧಿ ಬಾಲಕಿಯನ್ನು ಬಲಿ ಪಡೆದ ಘಟನೆ ಜನಾಕ್ರೋಶವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು.

ಈ ಘಟನೆಯನ್ನು ಜಿಲ್ಲಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಘಟನೆ ನಡೆದ ದಿನದ ತಡರಾತ್ರಿಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗ್ರಾಮಸ್ಥರಿಂದ ಮಾಹಿತಿ ಪಡೆದು ಸಾಕ್ಷ್ಯಾಧಾರ ನಾಶವಾಗದಂತೆ ಎಚ್ಚರಿಕೆ ವಹಿಸಿದ್ದರು. ಪ್ರಕರಣದ ತನಿಖೆಗೆ ಸೇಡಂ ಸಿಪಿಐ ಶಂಕರಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಚುರುಕಿನ ತನಿಖೆ: ಯಾವುದೇ ಪ್ರಕರಣವಾದರೂ ಕನಿಷ್ಠ ಮೂರು ತಿಂಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಬೇಕು. ಸಾಮಾನ್ಯವಾಗಿ ಅತ್ಯಾಚಾರದಂತ ಸೂಕ್ಷ್ಮ ಪ್ರಕರಣದ ತನಿಖೆಗೆ ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ಈ ಪ್ರಕರಣದಲ್ಲಿ ಆರೋಪಿ ಕೃತ್ಯ ಎಸಗಿದ ದಿನವೇ ಸಿಕ್ಕಿ ಬಿದ್ದಿದ್ದ. ಬಾಲಕಿ ದೇಹದ ಮೇಲೆ ಬಲತ್ಕಾರ ನಡೆದ ಬಲವಾದ ಸಾಕ್ಷ್ಯದ ಕಲೆಗಳು ಪತ್ತೆಯಾಗಿದ್ದವು. ಕಾಮುಕನ ಒಳಉಡುಪು ಬಾಲಕಿಯ ಶವ ಪತ್ತೆಯಾದ ಪೊದೆಯಲ್ಲಿ ದೊರೆತಿತ್ತು. ಹೀಗಾಗಿ ಸಿಪಿಐ ಶಂಕರಗೌಡ ನೇತೃತ್ವದ ತಂಡ ಯಾವುದೇ ವಿಳಂಬ ಮಾಡದೆ ಚುರುಕಿನ ತನಿಖೆ ನಡೆಸಿ, 20 ದಿನದೊಳಗೆ ಸುಮಾರು 80 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.

ಕಳೆದ ವಾರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ತನಿಖಾಧಿಕಾರಿಗಳು ತಯಾರಿ ನಡೆಸಿದ್ದರು. ಆದರೆ, ಪೌರತ್ವ ತಿದ್ದುಪತಿ ಕಾಯ್ದೆ ವಿವಾದದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ. ಬಾಲಕಿಗೆ ಕಾಮುಕ ಯಲ್ಲಪ್ಪ ತಿಂಡಿ ಆಸೆ ತೋರಿಸಿ ಆಕೆಯನ್ನು ಊರ ಹೊರಗಿನ ಅಂಗನವಾಡಿ ಕೇಂದ್ರದ ಸಮೀಪದ ಪೊದೆಯಲ್ಲಿ ಕರೆದೊಯ್ದು ಬಲಾತ್ಕಾರ ಎಸಗಿದ್ದ. ನಂತರ ಆತನ ನೀಚ ಕೃತ್ಯ ಬಯಲಿಗೆ ಬರದಂತೆ ಮಾಡಲು ಅಲ್ಲೇ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದ ಎನ್ನಲಾಗಿದೆ.

Advertisement

ಇತ್ತ, ಪೋಷಕರು ಮಗಳು ಸಂಜೆಯಾದರೂ ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡು ಹುಡುಕಾಟ ನಡೆಸಿದ್ದರು. ಮಗಳು ಪತ್ತೆಯಾಗಿರಲಿಲ್ಲ. ಆದರೆ, ಅಮಾಯಕ ಬಾಲಕಿ ಕಾಮುಕ ಯಲ್ಲಪ್ಪನೊಂದಿಗೆ ತಿರುಗಾಡುತ್ತಿದ್ದನ್ನು ಊರಿನ ಜನರು ನೋಡಿದ್ದರು. ಹೀಗಾಗಿ ಸಂಶಯಗೊಂಡು ಅವನನ್ನು ಹಿಡಿದು ಜನರೇ ವಿಚಾರಿಸಿದರೂ ತನಗೇ ಗೊತ್ತಿಲ್ಲ ಎಂಬಂತೆ ನಟಿಸಿದ್ದ. ಮೇಲಾಗಿ ಪ್ರಕರಣದ ದಿಕ್ಕು ತಪ್ಪಿಸಲು ಹಾಗೂ ತನ್ನ ವಿರುದ್ಧ ಸಾಕ್ಷ್ಯ ಸಿಗದಂತೆ ಮಾಡಲು ಕೃತ್ಯ ಎಸಗಿದ ಸ್ಥಳದ ಸ್ವಲ್ಪ ದೂರದಲ್ಲಿ ತನ್ನ ಒಳಉಡುಪನ್ನು ಮುಚ್ಚಿಟ್ಟಿದ್ದ. ಪೊಲೀಸರು ವಿಚಾರಣೆಯಲ್ಲಿ ತಾನು ಯಾವತ್ತೂ ಒಳ ಉಡುಪು ಹಾಕಿಲ್ಲ. ಹಾಕೋದೇ ಇಲ್ಲ ಎಂದು ವಾದಿಸಿದ್ದ ಎಂದು ಗೊತ್ತಾಗಿದೆ.

ಡಿ.2ರಂದು ಸುಲೇಪೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಇನ್ನೆರಡ್ಮೂರು ದಿನಗಳಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸುತ್ತಾರೆ.
ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಮಧ್ಯಂತರ ಪರಿಹಾರಕ್ಕೆ ಮನವಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಚುರುಕಾಗಿ ಪೂರ್ಣಗೊಳಿಸಿರುವ ಪೊಲೀಸರು, ಸಂತ್ರಸ್ತ ಕುಟುಂಬಕ್ಕೆ ಕಾನೂನಿನಡಿ ನೆರವು ಒದಗಿಸುವ ನಿಟ್ಟಿನಲ್ಲೂ ಕ್ರಮ ವಹಿಸಿದ್ದಾರೆ. ಪೋಕ್ಸೊ ಕಾನೂನಿನ
ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ 10 ಲಕ್ಷ ರೂ. ಆರ್ಥಿಕ ನೆರವು ಸಿಗುವ ಅವಕಾಶವಿದೆ. ಪ್ರತಿ ಜಿಲ್ಲೆಗೆ ನಿರ್ದಿಷ್ಟ ಅನುದಾನ ಲಭ್ಯವಾಗುತ್ತದೆ. ಅದರಲ್ಲಿ ಈ ಸಂತ್ರಸ್ತ ಬಾಲಕಿಯ ಕುಟುಂಬ ಕಡು ಬಡತನದಿಂದ ಕೂಡಿದ್ದು, ಪೋಕ್ಸೊ ಕಾಯ್ದೆಯಡಿ ಮಧ್ಯಂತರ ಪರಿಹಾರ ಒದಗಿಸಬೇಕೆಂದು ಪೊಲೀಸರೇ ಈಗಾಗಲೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಸಂತ್ರಸ್ತ ಬಾಲಕಿಯ ತಾಯಿಯಿಂದ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ ಎಂದು ತನಿಖಾಧಿಕಾರಿಗಳು ಖಚಿತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next