ಕಲಬುರಗಿ: ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಇನ್ನು ಪಠ್ಯಪುಸ್ತಕ ಮತ್ತು ಸಮವಸ್ತ್ರ ಪೂರೈಕೆಯಾಗಿಲ್ಲ. ಇದರಿಂದ ಆಂಗ್ಲ ಮಾಧ್ಯಮ ಆಯ್ಕೆ ಮಾಡಿಕೊಂಡ ಪೋಷಕರಿಗೆ ಆತಂಕ ಶುರುವಾಗಿದ್ದರೆ, ಪೋಷಕರಿಗೆ ಏನು ಉತ್ತರ ಕೊಡಬೇಕೆಂಬ ಸಂಕಷ್ಟದಲ್ಲಿ ಶಿಕ್ಷಕರು ಸಿಲುಕಿದ್ದಾರೆ.
Advertisement
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಆಯ್ದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 39 ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಪ್ರಾರಂಭಿಸಲಾಗಿದ್ದು, ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಮಕ್ಕಳಿಗೆ ಇಂಗ್ಲಿಷ್ ಬೋಧಿಸಲು ಪ್ರತಿ ಶಾಲೆಯ ಒಬ್ಬ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ 20 ಶಿಕ್ಷಕರಿಗೂ ತರಬೇತಿ ಕೊಡಲಾಗಿದೆ.
Related Articles
Advertisement
ಶಿಕ್ಷಕರಿಗೆ ಸಂಕಟ: ಕನ್ನಡ ಮತ್ತು ಇಂಗ್ಲಿಷ ಮಾಧ್ಯಮ ವಿಭಾಗ ಎರಡಕ್ಕೂ ಒಟ್ಟಿಗೆ ದಾಖಲಾತಿ ನಡೆಯುತ್ತಿದೆ. ಕನ್ನಡ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮೊದಲ ದಿನ ಬಟ್ಟೆ ಹಾಗೂ ಸಮವಸ್ತ್ರ ಸಿಗುತ್ತಿದ್ದರೆ, ಇಂಗ್ಲಿಷ ವಿಭಾಗದ ಮಕ್ಕಳಿಗೆ ಸಿಗುತ್ತಿಲ್ಲ. ನಮ್ಮ ಮಕ್ಕಳಿಗೆ ಯಾಕೆ ಬಟ್ಟೆ, ಪುಸ್ತಕ ಕೊಡುತ್ತಿಲ್ಲ ಎಂದು ಇಂಗ್ಲಿಷ ವಿಭಾಗಕ್ಕೆ ಮಕ್ಕಳನ್ನು ದಾಖಲಿಸಿದ ಪೋಷಕರು ನೇರವಾಗಿ ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ. ಪೋಷಕರಿಗೆ ಸಮಜಾಯಿಸಿ ಹೇಳುವುದೇ ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ.
ಆರಂಭದಿಂದಲೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಬೇಡಿಕೆ ಇದೆ. ಪಕ್ಕದ ಗ್ರಾಮದಿಂದ ಬಂದು ಮಕ್ಕಳನ್ನು ಇಂಗ್ಲಿಷ ಮಾಧ್ಯಮಕ್ಕೆ ಪೋಷಕರು ದಾಖಲಿಸುತ್ತಿದ್ದಾರೆ. ಆದರೆ, ಇಂಗ್ಲಿಷ ವಿಭಾಗಕ್ಕೆ ದಾಖಲಿಸಿದ ಪೋಷಕರು ಬಟ್ಟೆ ಮತ್ತು ಪಠ್ಯ ಪುಸ್ತಕ ಕೇಳುತ್ತಿದ್ದಾರೆ. ಪೂರೈಕೆಯಾಗಿಲ್ಲ ಎಂದು ತಿಳಿ ಹೇಳಿದಾಗ ಕೆಲ ಪೋಷಕರು ಅರ್ಥ ಮಾಡಿಕೊಂಡು ಸುಮ್ಮನೆ ಆಗಿದ್ದಾರೆ. ಆದರೆ, ಇನ್ನು ಕೆಲವರು ಕನ್ನಡ ವಿಭಾಗದ ಮಕ್ಕಳಿಗೆ ಕೊಟ್ಟಿದ್ದಿರಿ. ನಮ್ಮ ಮಕ್ಕಳಿಗೆ ಯಾಕೆ ಬಟ್ಟೆ ಮತ್ತು ಪಠ್ಯ-ಪುಸ್ತಕ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕರೊಬ್ಬರು ತಮ್ಮ ಸಂಕಟವನ್ನು ‘ಉದಯವಾಣಿ’ಗೆ ವಿವರಿಸಿದರು.
ಅಧಿಕಾರಿಗಳು ಹೇಳ್ಳೋದೇನು?: ಇಂಗ್ಲಿಷ ಮಾಧ್ಯಮ ಮಕ್ಕಳ ಪಠ್ಯ-ಪುಸ್ತಕ ಮತ್ತು ಸಮವಸ್ತ್ರ ಇನ್ನು ಮೇಲಿಂದಲೇ ಸರಬರಾಜು ಆಗಿಲ್ಲ. ತರಬೇತಿ ಪಡೆದ ಶಿಕ್ಷಕರ ಮೂಲಕ ಮಕ್ಕಳು ಸದಾ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ ಯಾವುದೇ ಪೋಷಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಪಠ್ಯ ಹೇಗೆ ಇರುತ್ತದೆ: ಕನ್ನಡ ಮಾಧ್ಯಮದಂತೆ ಇಂಗ್ಲಿಷ ಮಾಧ್ಯಮದಲ್ಲೂ ನಾಲ್ಕು ವಿಷಯಗಳು ಇರುತ್ತವೆ. ಇಂಗ್ಲಿಷ ಪ್ರಥಮ ಭಾಷೆ ಮತ್ತು ಕನ್ನಡ ದ್ವಿತೀಯ ಭಾಷೆಯಾಗಿರುತ್ತದೆ. ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳು ಇಂಗ್ಲಿಷ್ ಭಾಷೆಯಲ್ಲಿ ಇರುತ್ತವೆ.
ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಯಾಗಿಲ್ಲ. ಜುಲೈ ತಿಂಗಳಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳು ಆರಂಭಗೊಳ್ಳಲಿವೆ. ಅಲ್ಲಿವರೆಗೆ ಮಕ್ಕಳಿಗೆ ಬೇಸಿಕ್ ಇಂಗ್ಲಿಷ್ ಬಗ್ಗೆ ಶಿಕ್ಷಕರು ಬೋಧಿಸುತ್ತಾ ಸದಾ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.•ಶಾಂತಗೌಡ, ಉಪನಿರ್ದೇಶಕರು,
ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ