ಕಲಬುರಗಿ: ಕೇಂದ್ರ ಸರ್ಕಾರದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆಯ ‘ದಂಡಂ ದಶಗುಣಂ’ ಪದ್ಧತಿಯಿಂದ ಮಾಲಿನ್ಯ ತಪಾಸಣೆ (ಎಮಿಷನ್ ಟೆಸ್ಟ್)ಕೇಂದ್ರಗಳತ್ತ ಓಡುವರ ಸಂಖ್ಯೆ ಹೆಚ್ಚಾಗಿದೆ. ಭಾರಿ ದಂಡದಿಂದ ಪಾರಾಗಲು ವಾಹನಗಳ ಹೊಗೆ ತಪಸಣೆ ಮಾಡಿಸಲು ಸವಾರರು ಮುಂದಾಗುತ್ತಿದ್ದಾರೆ.
ವಾಹನ ಮಾಲಿನ್ಯ ಪ್ರಮಾಣ ಪತ್ರ ಹೊಂದಿರದ ಯಾವುದೇ ವಾಹನಕ್ಕೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಆದರೆ, ಎಮಿಷನ್ ಟೆಸ್ಟ್ ಮಾಡಿಸಲು ಬೈಕ್‌ಗೆ 50 ರೂ., ಪೆಟ್ರೋಲ್, ಎಲ್ಪಿಜಿಯ ತ್ರಿಚಕ್ರ ವಾಹನಕ್ಕೆ 60 ರೂ., ನಾಲ್ಕು ಚಕ್ರದ ವಾಹನಕ್ಕೆ 90 ರೂ. ಮತ್ತು ಯಾವುದೇ ಡೀಸೆಲ್ ವಾಹನಗಳಿಗೆ 125 ರೂ. ಮಾತ್ರವೇ ಶುಲ್ಕ ಇದೆ. ಹೀಗಾಗಿ ಕಡಿಮೆ ಹಣದಲ್ಲಿ ಪ್ರಮಾಣಪತ್ರ ಸಿಗುವಾಗ ಯಾಕೆ ಸಾವಿರ ರೂ. ದಂಡ ಕಟ್ಟಬೇಕೆಂಬ ಅರಿವು ಸವಾರರಲ್ಲಿ ಮೂಡಿದೆ.
25 ಕೇಂದ್ರಗಳು: ಜಿಲ್ಲಾದ್ಯಂತ ಗಣಕೀಕೃತ 25 ಎಮಿಷನ್ ಟೆಸ್ಟ್ ಕೇಂದ್ರಗಳಿದ್ದು, ಕಲಬುರಗಿ ನಗರದಲ್ಲಿ ಅತಿ ಹೆಚ್ಚು 21 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎರಡು ಘಟಕದಲ್ಲಿ ಎಮಿಷನ್ ಟೆಸ್ಟ್ ಕೇಂದ್ರಗಳಿದ್ದರೆ, ಸೇಡಂನಲ್ಲಿ ಎರಡು, ಚಿಂಚೋಳಿ ಮತ್ತು ಜೇವರ್ಗಿ ತಾಲೂಕಿನಲ್ಲಿ ತಲಾ ಒಂದು ಎಮಿಷನ್ ಕೇಂದ್ರ ಇದೆ.
ಎಮಿಷನ್ ಕೇಂದ್ರ ಆರಂಭಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಾರಿಗೆ ಆಯುಕ್ತರು ಅರ್ಜಿ ಪರಿಶೀಲಿಸಿದ ನಂತರ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ಬರುತ್ತದೆ. ನಮ್ಮ ಕಚೇರಿಯಿಂದ ನಿರೀಕ್ಷಕರೊಬ್ಬರು ಎಮಿಷನ್ ಕೇಂದ್ರಕ್ಕೆ ತೆರಳಿ ವರದಿ ತಯಾರಿಸಿ ಕೇಂದ್ರಕ್ಕೆ ಅನುಮತಿ ಪತ್ರ ನೀಡಲಾಗುತ್ತದೆ. ‘ಭಾರತ್ ಸ್ಟೇಜ್-4’ ಮಾನದಂಡ ಪ್ರಕಾರವೇ ಎಮಿಷನ್ ಕೇಂದ್ರಕ್ಕೆ ಅನುಮತಿ ನೀಡಲಾಗುತ್ತದೆ ಎನ್ನುತ್ತಾರೆ (ಆರ್‌ಟಿಒ) ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ.
4.89 ಲಕ್ಷ ವಾಹನಗಳು: ಜಿಲ್ಲೆಯಲ್ಲಿ ಬೈಕ್, ಕಾರು, ಆಟೋ, ಟ್ರಕ್ ಮತ್ತು ಶಾಲಾ ವಾಹನಗಳು ಸೇರಿ ಒಟ್ಟಾರೆ 4,89,317 ವಾಹನಗಳಿವೆ. ವಾಹನಗಳು ಹೊರ ಸೂಸುವ ಹೊಗೆಯಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಎಂಜಿನ್ ಗುಣಮಟ್ಟ ಸುಧಾರಣೆಯಲ್ಲಿದ್ದರೆ ಆದಷ್ಟು ಮಟ್ಟಿಗೆ ವಾಯು ಮಾಲಿನ್ಯ ತಡೆಯಬಹುದು. ಈ ನಿಟ್ಟಿನಲ್ಲಿ ಮಿತಿಗಿಂತ ಹೆಚ್ಚು ಹೊಗೆ ಉಗುಳವಿಕೆ ವಾಹನಗಳಿಗೆ ದಂಡ ಹಾಕಲಾಗುತ್ತಿದೆ.
ಈ ಮೊದಲು ಎಮಿಷನ್ ಟೆಸ್ಟ್ ಮಾಡಿಸುವರ ಸಂಖ್ಯೆ ಕಡಿಮೆಯಾಗಿತ್ತು. ದಿನಕ್ಕೆ 10ರಿಂದ 15 ಜನರು ಮಾತ್ರ ವಾಹನದ ಹೊಗೆ ತಪಾಸಣೆ ಮಾಡಿಸಲು ಬರುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ 60ಕ್ಕೂ ಹೆಚ್ಚು ವಾಹನಗಳು ತಪಾಸಣೆಗೆ ಬರುತ್ತಿವೆ. ಕೇವಲ ಒಂದು ನಿಮಿಷದಲ್ಲಿ ಹೊಗೆ ಪರೀಕ್ಷೆ ಮುಗಿಯುತ್ತದೆ ಎಂದು ನಗರದ ಸೇಡಂ ರಸ್ತೆಯ ಎಮಿಷನ್ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.