ಕಲಬುರಗಿ: ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ರಸ್ತೆ ತಡೆ ನಡೆಸಿದ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಗರದ ರಾಮ ಮಂದಿರ ವೃತ್ತದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಸ್ತೆ ತಡೆಯಿಂದ ಉಂಟಾಗಿದ್ದ ಸಂಚಾರ ದಟ್ಟಣೆ ನಿವಾರಣೆಗಾಗಿ ಪ್ರತಿಭಟನಾಕಾರರ ಗುಂಪು ಚದುರಿಸಲು ಪೊಲೀಸರು ಹರಸಾಹಸಪಟ್ಟರು.
ಇಲ್ಲಿನ ಆರ್.ಟಿ. ನಗರ, ಓಝಾ ಲೇಔಟ್ ಮತ್ತು ವಿವೇಕಾನಂದ ನಗರದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಜಲಮಂಡಳಿ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ರಸ್ತೆ ತಡೆ ನಡೆಸಿದರು.
ಬೆಳಗ್ಗೆ 9 ಗಂಟೆ ಸುಮಾರಿಗೆ ಮೂರು ಬಡಾವಣೆಗಳ ಮಹಿಳೆಯರು ಮತ್ತು ಪುರುಷರು ದಿಢೀರ್ ಆಗಿ ರಾಮ ಮಂದಿರ ವೃತ್ತದಲ್ಲಿ ಜಮಾವಣೆಯಾಗಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. 30ಕ್ಕೂ ಹೆಚ್ಚು ನಿವಾಸಿಗಳು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ವೃತ್ತದ ನಾಲ್ಕು ಮಾರ್ಗಗಳಲ್ಲಿ ನೂರಾರು ವಾಹನಗಳು ನಿಂತಿದ್ದವು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅಶೋಕ ನಗರ ಪೊಲೀಸರು, ರಸ್ತೆ ತಡೆ ಮಾಡುತ್ತಿದ್ದ ಸಾರ್ವಜನಿಕರನ್ನು ಚದುರಿಸಲು ಮುಂದಾದರು. ಈ ವೇಳೆ ಪರಸ್ಪರ ವಾಗ್ಧಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ರಸ್ತೆಯಲ್ಲಿ ಸಾಗುತ್ತಿದ್ದ ಜನರು, ವಾಹನ ಸವಾರರು ಸ್ಥಳದಲ್ಲಿ ಗುಂಪಾಗಿ ಸೇರಿದರು.
ಈ ಹಂತದಲ್ಲಿ ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಾಕಾರರನ್ನು ಚದುರಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್, ಎಸ್‌ಪಿ ಯಡಾ ಮಾರ್ಟಿನ್ ಮಾಬನ್ಯಾಂಗ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಮೂರು ಬಡಾವಣೆಗಳಲ್ಲಿ ಅನೇಕ ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಟ್ಯಾಂಕ್‌ನಲ್ಲಿ ನೀರಿದ್ದರೂ ಸರಬರಾಜು ಆಗುತ್ತಿಲ್ಲ. ಎಲ್ಲಿಯಾದರೂ ನೀರು ಸೋರುತ್ತಿದ್ದರೆ ಪರಿಶೀಲಿಸಿ ಪೈಪ್‌ಲೈನ್ ಸರಿಪಡಿಸುವಂತೆ ಹಲವು ಬಾರಿ ಜಲ ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮಕೈಗೊಳ್ಳದ ಕಾರಣ ಅನಿರ್ವಾಯವಾಗಿ ರಸ್ತೆ ತಡೆ ನಡೆಸಬೇಕಾಯಿತೆಂದು ಪ್ರತಿಭಟನಾಕಾರರು ತಿಳಿಸಿದರು. ಎರಡು ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.