ಕಲಬುರಗಿ: ನಗರದ ಜಿಲ್ಲಾ ಆಸ್ಪತ್ರೆ (ಜಿಮ್ಸ್)ಗೆ ಸಂಸದ ಡಾ| ಉಮೇಶ ಜಾಧವ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರು.
ಆಸ್ಪತ್ರೆಯಲ್ಲಿ ಸುತ್ತಾಡಿ ಪರಿಶೀಲಿಸಿದ ಅವರು, ಮಹಿಳಾ ಮತ್ತು ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಹಾಗೂ ಇತರ ವಾರ್ಡ್‌ಗಳಿಗೆ ತೆರಳಿ ವೀಕ್ಷಿಸಿದರು.
ವಾರ್ಡ್‌ನಲ್ಲಿ ಮಿತಿ ಮೀರಿ ರೋಗಿಗಳನ್ನು ದಾಖಲಿಸಿರುವುದನ್ನು ಕಂಡು ಕೆಂಡಾಮಂಡಲರಾದರು. ಜತೆಗೆ ಹೆರಿಗೆ ವಾರ್ಡ್‌ಗಳಲ್ಲಿ ಅಸ್ವಚ್ಛತೆ ಹಾಗೂ ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ನೋಡಿ ಸಿಬ್ಭಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸಂಸದರು ಆಸ್ಪತ್ರೆಗೆ ಬಂದಿರುವ ವಿಷಯ ತಿಳಿದು ಹಿರಿಯ ಅಧಿಕಾರಿಗಳು ದೌಡಾಯಿಸಿದರು. ಆಗ ಹಿರಿಯ ಅಧಿಕಾರಿಗಳು ಬರುತ್ತಲೇ ಅವರ ವಿರುದ್ಧವೂ ಸಂಸದರು ಗರಂ ಆದರು. ಇದೇ ವೇಳೆ ಕೆಲ ರೋಗಿಗಳು ‘ವೈದ್ಯರು ಸರಿಯಾಗಿ ಸ್ಪಂದಿಸುವುದಿಲ್ಲ. ಔಷಧಿಯನ್ನು ಹೊರಗಿನಿಂದ ತರುವಂತೆ ಹೇಳುತ್ತಾರೆ’ ಎಂದು ದೂರಿದರು.
ಇದು ಸಂಸದರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತು. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಮ್ಸ್ ಅಧಿಕಾರಿಗಳನ್ನು ಸಂಸದರು ತರಾಟೆ ತೆಗೆದುಕೊಂಡರು. ಮುಂದಿನ ವಾರ ಮತ್ತೆ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಎಲ್ಲ ಅವ್ಯವಸ್ಥೆ ಸರಿ ಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯ ಅರವಿಂದ ಚವ್ಹಾಣ, ರಮೇಶ ಧುತ್ತರಗಿ ಹಾಗೂ ಮತ್ತಿತರರು ಇದ್ದರು.