Advertisement

ಪ್ರಕೃತಿ ವಿಕೋಪಕ್ಕೆ ಮುಂಜಾಗ್ರತೆ ಅವಶ್ಯ: ಪಾಂಡ್ವೆ

01:27 PM May 31, 2019 | Naveen |

ಕಲಬುರಗಿ: ರಾಜ್ಯದಲ್ಲಿ ಒಂದು ಕಡೆ ಹೆಚ್ಚು ಮಳೆಯಾಗಿ ಅನಾವೃಷ್ಟಿಯಾದರೆ, ಇನ್ನೊಂದೆಡೆ ಬರಗಾಲದ ಛಾಯೆ ಮೂಡಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಆಡಳಿತ ವರ್ಗ ಮುಂಜಾಗ್ರತಾ ಕ್ರಮ ಕೈಗೊಂಡರೆ ಪ್ರಕೃತಿ ವಿಕೋಪ ದಿಂದ ಆಗುವ ನಷ್ಟವನ್ನು ತಕ್ಕಮಟ್ಟಿಗಾದರೂ ತಡೆಯಬಹುದಾಗಿದೆ ಎಂದು ಸಹಾಯಕ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ ಹೇಳಿದರು.

Advertisement

ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ, ವಿಕೋಪ ಮಿತಗೊಳಿಸುವಿಕೆ, ಪೂರ್ವಸಿದ್ಧತೆ, ಸ್ಪಂದನಾ ಯೋಜನೆಯಡಿ ಆಯೋಜಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ರಾಜ್ಯದ ಕೊಡಗಿನಲ್ಲಿ ಭಾರಿ ಮಳೆಯಿಂದ ಭೂಮಿ ಕುಸಿತವಾಗಿ ಹಲವಾರು ಜನರು ಆಸರೆಯಿಲ್ಲದೆ ಪರದಾಡಿದ್ದರು. ಜಾನುವಾರುಗಳು ತೀವ್ರ ಸಂಕಷ್ಟ ಅನುಭವಿಸಿದ್ದವು. ಕೋಟ್ಯಂತರ ರೂ.ಗಳ ಆಸ್ತಿಗೆ ಹಾನಿಯಾಗಿತ್ತು. ಇಂತಹ ಪ್ರಕೃತಿ ವಿಕೋಪಗಳ ಮುನ್ಸೂಚನೆ ಕಂಡು ಬಂದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವುದು ಒಳಿತು. ಸಂಬಂಧಿಸಿದ ಅಧಿಕಾರಿಗಳು ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿದರೆ ಅನಾಹುತಗಳನ್ನು ತಗ್ಗಿಸಬಹುದಾಗಿದೆ ಎಂದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ| ಪರಮೇಶ ಜೆ.ಆರ್‌. ಮಾತನಾಡಿ, ನೈಸರ್ಗಿಕ ವಿಕೋಪಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಿದ್ದಲ್ಲಿ ಸ್ವಲ್ಪ ಮಟ್ಟಿಗಾದರೂ ಅನಾಹುತಗಳನ್ನು ತಡೆಯಬಹುದು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಕೋಪ ನಿರ್ವಹಣಾ ಕಾರ್ಯಾಗಾರ ಹಮ್ಮಿಕೊಂಡು ನೈಸರ್ಗಿಕ ವಿಕೋಪ ತಡೆಯುವುದರ ಕುರಿತು ತರಬೇತಿ ನೀಡಲಾಗುತ್ತಿದೆ. ವಿಕೋಪ ತಡೆಯುವುದು, ವಿಕೋಪ ಆಗದಂತೆ ಸ್ಪಂದಿಸುವುದು, ಪುನರ್‌ ವಸತಿ ನಿರ್ಮಿಸಿಕೊಳ್ಳುವುದೇ ಈ ತರಬೇತಿ ಕಾರ್ಯಾಗಾರದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಅಂಬೋಜಿ ನಾಯಕವಾಡಿ ಹಾಗೂ ಅಧಿಕಾರಿಗಳು ಇದ್ದರು. ವಿವಿಧ ಇಲಾಖೆಗಳ ಗ್ರೂಪ್‌ ಎ ಮತ್ತು ಬಿ ವೃಂದದ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next