Advertisement

ಪ್ಲಾಸ್ಟಿಕ್‌ ತ್ಯಜಿಸಿ ಬಟ್ಟೆ ಚೀಲ ಬಳಸಿ

10:41 AM Jul 21, 2019 | Naveen |

ಕಲಬುರಗಿ: ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ ಬಳಕೆಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವಿನೂತನ ಮಾರ್ಗ ಕಂಡುಕೊಂಡಿದೆ. ಬಟ್ಟೆ ಚೀಲ ತಯಾರಿಕೆ ಮತ್ತು ಮಾರಾಟಕ್ಕೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ನೀಡುತ್ತಿದೆ.

Advertisement

ಪ್ಲಾಸ್ಟಿಕ್‌ ಮೇಲಿನ ಜನರ ವ್ಯಾಮೋಹದಿಂದ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ. ಹೀಗಾಗಿ ಪ್ಲಾಸ್ಟಿಕ್‌ ಬದಲಿಗೆ ಬಳಸಬಹುದಾದ ಪರ್ಯಾಯ ವಸ್ತುಗಳ ಬಗ್ಗೆ ಪಾಲಿಕೆಯೇ ಚಿತ್ತ ಹರಿಸಿದ್ದು, ಮಾರುಕಟ್ಟೆಯಲ್ಲಿ ಬಟ್ಟೆ ಚೀಲಗಳು ಯಥೇಚ್ಛ ಪ್ರಮಾಣದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲು ಮುಂದಾಗಿದೆ.

ದೀನ್‌ದಯಾಳ್‌ ಅಂತೋದಯ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ (ಡೇ-ನಲ್ಮ)ಯಡಿ ನೋಂದಾಯಿತ ಮಹಿಳಾ ಸಂಘಗಳ ಮಹಿಳೆಯರಿಗೆ ಬಟ್ಟೆ ಚೀಲ ತಯಾರಿಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಅಷ್ಟೇ ಅಲ್ಲ, ಆರಂಭಿಕವಾಗಿ ಪಾಲಿಕೆ ಆವರಣದಲ್ಲಿ ಬಟ್ಟೆ ಚೀಲಗಳ ಮಾರಾಟಕ್ಕೆ ಮಹಿಳೆಯರಿಗೆ ಮಳಿಗೆ ಕಲ್ಪಿಸಲಾಗಿದೆ.

ಬಟ್ಟೆ ಚೀಲ ಬಳಸಿ: ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಮತ್ತು ಉತ್ಪನ್ನಗಳು ಪರಿಸರಕ್ಕೆ ಮಾರಕವಾಗಿವೆ. ಜನರ ಆರೋಗ್ಯದ ಮೇಲೂ ಪ್ಲಾಸ್ಟಿಕ್‌ ಕೆಟ್ಟ ಪರಿಣಾಮ ಬೀರುತ್ತಿದೆ. ಕಸ ವಿಲೇವಾರಿ ಹಾಗೂ ಚರಂಡಿಯೊಳಗೆ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು ಸೇರಿಕೊಳ್ಳುವುದರಿಂದ ನಗರದ ನೈರ್ಮಲ್ಯ ಕಾಪಾಡಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಪ್ಲಾಸ್ಟಿಕ್‌ನ ಪರ್ಯಾಯ ವಸ್ತುಗಳ ಬಗ್ಗೆ ಸಾರ್ವಜನಿಕರು ಮತ್ತು ವರ್ತಕರಿಗೆ ಮನವರಿಕೆ ಮಾಡಿಸಲಾಗುವುದು ಎನ್ನುತ್ತಾರೆ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್‌.

ಕಾನೂನು ಬಾಹಿರವಾಗಿ ಯಾರೂ ಪ್ಲಾಸ್ಟಿಕ್‌ ಬಳಸಬಾರದು. ಹೋಟೆಲ್, ಕಿರಾಣಿ ಅಂಗಡಿಯವರು ಮತ್ತು ಹಣ್ಣು, ತರಕಾರಿ ಮಾರಾಟಗಾರರು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ನಲ್ಲಿ ಯಾವುದೇ ಆಹಾರ, ಸಾಮಗ್ರಿಗಳನ್ನು ನೀಡಬಾರದು. ಜನತೆ ಪ್ಲಾಸ್ಟಿಕ್‌ ಬಳಕೆಯಿಂದ ದೂರ ಇರಬೇಕು. ಬಟ್ಟೆ ಚೀಲ ಬಳಕೆ ಮಾಡಬೇಕು. ಎಲ್ಲರ ಸಹಕಾರದಿಂದ ಮಾತ್ರ ಪ್ಲಾಸ್ಟಿಕ್‌ ನಿಯಂತ್ರಣ ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

ಬೇಡಿಕೆ ಅನುಸಾರ ಉತ್ಪನ್ನ: ಮಹಾನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೇ-ನಲ್ಮ ಅಡಿಯ ಮಹಿಳಾ ಸ್ವ-ಸಹಾಯ ಸಂಘಗಳನ್ನು ಒಗ್ಗೂಡಿಸಿ ಬಟ್ಟೆ ಚೀಲ ಉತ್ಪನ್ನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. 8X12, 12X15, 12X18 ಇಂಚಿನ ಮೂರು ವಿವಿಧ ಬಟ್ಟೆ ಚೀಲಗಳನ್ನು ತಯಾರಿಸಲಾಗಿದೆ. ಸಾರ್ವಜನಿಕರು, ವ್ಯಾಪಾರಿಗಳ ಬೇಡಿಕೆ ಅನುಸಾರ ಚೀಲಗಳನ್ನು ಉತ್ಪಾದಿಸಲು ಪ್ರೋತ್ಸಾಹಿಸಲಾಗುವುದು ಎಂದು ಪಾಲಿಕೆ ಸಮುದಾಯ ವ್ಯವಹಾರಿಕ ಅಧಿಕಾರಿ ವಿಜಯಲಕ್ಷ್ಮೀ ಪಟ್ಟೇದಾರ ಹೇಳುತ್ತಾರೆ.

ಹೊಸ ಪ್ರಯತ್ನ: ನಗರದಲ್ಲಿ ಸುಮಾರು ಒಂದು ಸಾವಿರ ಮಹಿಳಾ ಸಂಘಗಳು ಕಾರ್ಯನಿವರ್ಹಿಸುತ್ತಿವೆ. ಅನೇಕ ಸಂಘಗಳ ಪ್ರತಿನಿಧಿಗಳು ಬ್ಯೂಟಿ ಪಾರ್ಲರ್‌ ಮತ್ತಿತರ ಸ್ವಾವಲಂಬಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಇದೇ ಮೊದಲ ಬಾರಿಗೆ ಪಾಲಿಕೆ ಸಹಯೋಗದಲ್ಲಿ ಬಟ್ಟೆ ಚೀಲ ಉತ್ಪನ್ನ ಹಾಗೂ ಮಾರಾಟಕ್ಕೆ ಪ್ರೋತ್ಸಾಹ ನೀಡಿದೆ. ಇದೊಂದು ಹೊಸ ಪ್ರಯತ್ನ. ನಮ್ಮ ಮನೆಗಳಲ್ಲಿ ಬಟ್ಟೆ ಚೀಲ ತಯಾರಿಸುತ್ತೇವೆ. ಕಡಿಮೆ ದರದಲ್ಲಿ ಬಟ್ಟೆ ಚೀಲಗಳು ಲಭ್ಯ ಇರುತ್ತವೆ ಎಂದು ಜೈ ಕನ್ನಡಾಂಬೆ ಜಿಲ್ಲಾ ಮಟ್ಟದ ಕಲ್ಯಾಣಾಭಿವೃದ್ಧಿ ಸಂಘದ ಅಧ್ಯಕ್ಷೆ ಅರ್ಚನಾ ಟೆಂಗಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next