ಕಲಬುರಗಿ: ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿ ಹರಿಕಾರ ದಿ. ಡಿ. ದೇವರಾಜ ಅರಸು ಅವರ 104ನೇ ಜನ್ಮದಿನವನ್ನು ಆ. 20 ರಂದು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಡಿ. ದೇವರಾಜ ಅರಸು ಜಯಂತ್ಯುತ್ಸವ ಸಮಿತಿ ಸರ್ವಾನುಮತದ ತೀರ್ಮಾನ ಕೈಗೊಂಡಿತು.
ಅರಸು ದಿನಾಚರಣೆ ದಿನದಂದು ಡಿ. ದೇವರಾದ ಅರಸು ಭಾವಚಿತ್ರದ ಬೃಹತ್ ಮೆರವಣಿಗೆ ಅಲಂಕೃತ ವಾಹನದಲ್ಲಿ ಬೆಳಗ್ಗೆ 9ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರಾರಂಭವಾಗಿ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಳಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳ ವ್ಯವಸ್ಥೆ ಮಾಡಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು.
ಅಂದು ಬೆಳಗ್ಗೆ 11ಕ್ಕೆ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುವ ಸಮಾರಂಭಕ್ಕೆ ಶಿಷ್ಟಾಚಾರದಂತೆ ಎಲ್ಲ ಚುನಾಯಿತ ಜನಪ್ರತಿನಿಧಿಗಳನ್ನು ಮುಂಚಿತವಾಗಿ ಆಹ್ವಾನಿಸಲಾಗುವುದು. ಡಿ. ದೇವರಾಜ ಅರಸು ಜೀವನ ಸಾಧನೆ ಕುರಿತು ಸಾಹಿತಿ ಚಿ.ಸಿ.ನಿಂಗಣ್ಣ ಅವರಿಂದ ಉಪನ್ಯಾಸ ನಡೆಸಲು ಸಭೆಯು ಒಪ್ಪಿಗೆ ಸೂಚಿಸಿತು.
ಡಿ.ದೇವರಾಜ ಅರಸು ಜಯಂತಿ ಅಂಗವಾಗಿ ಬಿ.ಸಿ.ಎಂ. ವಸತಿ ನಿಲಯದಲ್ಲಿ ವಾಸಿಸುವ 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಹ ವಿದ್ಯಾರ್ಥಿಗಳ ಪಟ್ಟಿ ನೀಡಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಕ್ರೀಡೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಅಂದು ಜಿಲ್ಲೆಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಡಿ. ದೇವರಾಜ ಅರಸು ಜಯಂತಿ ಆಚರಿಸುವಂತೆ ಸುತ್ತೋಲೆ ಹೊರಡಿಸಲಾಗುವುದು. ತಾಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ದಿನಾಚರಣೆ ಆಚರಿಸಲು ತಹಶೀಲ್ದಾರರು ಪೂರ್ವಭಾವಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಹ್ವಾನ ಪತ್ರಗಳನ್ನು ಸಕಾಲದಲ್ಲಿ ಎಲ್ಲ ಗಣ್ಯರಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಸಮುದಾಯದ ಮುಖಂಡರು ಮಾತನಾಡಿ, ಶೇ.32ರಷ್ಟು ಮೀಸಲಾತಿ ಪಡೆಯುವ ಎಲ್ಲ ಹಿಂದುಳಿದ ಸಮುದಾಯದವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನಿಗಮದಿಂದ ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ಜಯಂತಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಆಗಮಿಸಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಶಿಷ್ಠಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್, ಸಮಾಜದ ಹಿರಿಯ ಮುಖಂಡರಾದ ಶಿವಲಿಂಗಪ್ಪ ಕಿನ್ನೂರ, ಕಟುಬು ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ, ಗೊಂಡ-ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ, ಈಡಿಗ ಸಮಾಜದ ರಾಜ್ಯ ಸಮಿತಿ ಸದಸ್ಯ ಹಣಮಂತ ಆಲೂರ, ಕಲ್ಯಾಣ ಕರ್ನಾಟಕದ ರಾಜ್ಯಾಧ್ಯಕ್ಷ ವೆಂಕಟೇಶ ಯಾದವ, ಹರಳಯ್ಯ ಸಮಾಜದ ಶಿವಶರಣಪ್ಪ ನಿಂಗಪ್ಪ ಕೌಲಗಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್ ಮನಿಯಾರ, ಗಿಸಾಡಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಪವಾರ, ಕೋಲಿ ಸಮಾಜದ ದೇವಿಂದ್ರ ಚಿಗರಳ್ಳಿ ಹಾಗೂ ಮತ್ತಿತರರು ಇದ್ದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ಪೂರ್ವಸಿದ್ಧತೆ ಬಗ್ಗೆ ವಿವರಿಸಿದರು.