ಕಲಬುರಗಿ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆಗೆ ಅಂಗನವಾಡಿ ಮತು ಆಶಾ ಕಾರ್ಯಕರ್ತೆಯರನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಶಿಕ್ಷಣ ನಿರಂತರವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಮಾಧವರಾವ್ ಕೆ. ಪಾಟೀಲ ತಿಳಿಸಿದರು.
ನಗರದ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ “ಸಾರ್ವಜನಿಕರಿಗೊಂದು ಸವಾಲು’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯು ನಿರಂತರ ಆರೋಗ್ಯ ಅರಿವಿನ ಶಿಕ್ಷಣ ನೀಡುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಆರೋಗ್ಯ ಶಿಕ್ಷಣ ಪಡೆದ ಸಾರ್ವಜನಿಕರು ದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅವರ ಮೇಲಿದೆ. ಇದನ್ನು ಸರಿಯಾಗಿ ನಿಭಾಯಿಸಿದಲ್ಲಿ ಡೆಂಘೀ ಮತ್ತು ಚಿಕನ್ ಗುನ್ಯಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಕ್ರಮ ಸಾರ್ಥಕವಾಗುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು “ಸಾರ್ವಜನಿಕರಿಗೊಂದು ಸವಾಲು’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸೆಂಟ್ ಜಾನ್ಸ್ ಆಸ್ಪತ್ರೆಯ ಡಾ| ಮಲ್ಲೆರಾವ್ ಮಲ್ಲೆ ಮಾತನಾಡಿ, ಈ ವರ್ಷ ನಗರ ಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ತಮ್ಮ ಮನೆ ಒಳಗಡೆ ಹಾಗೂ ಹೊರಗಡೆ ಇರುವ ನೀರಿನ ಸಂಗ್ರಹಕಗಳನ್ನು ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಖಾಲಿ ಮಾಡಿ ತಿಕ್ಕಿ ತೊಳೆದು ಒಣಗಿಸಿ ನೀರು ತುಂಬಿ ಭದ್ರವಾಗಿ ಮುಚ್ಚಿಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ ಮಾತನಾಡಿದರು. ಜಿಲ್ಲಾ ವಿಬಿಡಿಸಿ ಅಧಿ ಕಾರಿ ಡಾ| ಬಸವರಾಜ ಗುಳಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ| ಚಂದ್ರಮೌಳೇಶ್ವರ ಸೇರಿದಂತೆ ಕಿರಿಯ ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು, ಕರ್ಣಿಕ ಕೋರೆ ನಿರೂಪಿಸಿದರು, ಶರಣಬಸವ ವಂದಿಸಿದರು.
“ಸಾರ್ವಜನಿಕರಿಗೊಂದು ಸವಾಲು’ ಕಾರ್ಯಕ್ರಮದ ಅಂಗವಾಗಿ ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಪ್ರತಿಯೊಂದು ಮನೆಗೆ, ಕಚೇರಿ, ಶಾಲೆಗಳಿಗೆ ಭೇಟಿ ನೀಡಿ ಡೆಂಘೀ ರೋಗ ಹರಡಲು ಕಾರಣವಾಗಿರುವ ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಪರಿಶೀಲಿಸಿ “ಈಡೀಸ್ ಸೊಳ್ಳೆ ಮುಕ್ತ ಪ್ರದೇಶ’ಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿ ಹೇಳುತ್ತಾರೆ. ಈ ಕಾರ್ಯಕ್ರಮ ಜ. 31ರ ವರೆಗೆ ನಡೆಯಲಿದೆ.
. ಡಾ| ಮಾಧವರಾವ್ ಕೆ. ಪಾಟೀಲ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ