ಕಲಬುರಗಿ: ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಸಲ ಒಟ್ಟಾರೆ ಮತಗಟ್ಟೆಗಳಲ್ಲಿ ಶೇ.50ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಯಶವಂತ ಗುರುಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2380 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳಲ್ಲಿ ಅರ್ಧದಷ್ಟು ಮತಗಟ್ಟೆಗಳು ಎಂದರೆ ಸುಮಾರು 1200 ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಲಿದೆ. ಕಲಬುರಗಿ ಉತ್ತರ ಮತಕ್ಷೇತ್ರದಲ್ಲೇ ಹೆಚ್ಚಿನ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಕಳೆದ ಸಲ ಮತಗಟ್ಟೆಯೊಂದರಲ್ಲಿ ಹೆಚ್ಚಿನ ಮತ ಆಗಿರುವುದನ್ನು ಅವಲೋಕಿಸಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಸಿಸಿ ಕ್ಯಾಮರಾ ಆಯೋಗದ ವೆಬ್ ಸೈಟ್ ನಲ್ಲಿ ಲೈವ್ ನೋಡಬಹುದು. ಎಲ್ಲರೂ ಮುಖ ತೋರಿಸಿಯೇ ಮತ ಹಾಕಬೇಕು ಎಂದರು.
ಜಿಲ್ಲೆಯಲ್ಲಿ 42 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 3.50.ಕೋ.ರೂ ವಶಪಡಿಸಿಕೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ 40 ಲಕ್ಷ ರೂ ಜಫ್ತಿ ಮಾಡಿಕೊಳ್ಳಲಾಗಿತ್ತು. ಈಗ ಚುನಾವಣೆ ಅಧಿಸೂಚನೆ ಮುಂಚೆಯೇ ಇಷ್ಟೊಂದು ಪ್ರಮಾಣದಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಉಪಸ್ಥಿತರಿದ್ದರು.
ಇದನ್ನೂ ಓದಿ: ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ; ಯಾವುದೇ ಆತುರವಿಲ್ಲ ಎಂದ ಚುನಾವಣಾ ಆಯೋಗ