ಹಣಮಂತರಾವ ಭೈರಾಮಡಗಿ
ಕಲಬುರಗಿ: ಕಲ್ಯಾಣ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿಗೆ ರಾಜ್ಯ ಸರ್ಕಾರ ಕೇಂದ್ರದ ಬೆಂಬಲ ಬೆಲೆಗೆ ಕೇವಲ 300 ರೂ. ಮಾತ್ರ ಪ್ರೋತ್ಸಾಹಧನ ನಿಗದಿ ಮಾಡಿದೆ.
ಕೇಂದ್ರದ ಬೆಂಬಲ ಬೆಲೆಗೆ ಗರಿಷ್ಠ ಸಾವಿರ ಇಲ್ಲದೇ 500 ರೂ. ಆದರೂ ಹೆಚ್ಚಳವಾಗುತ್ತದೆ ಎನ್ನುವ ರೈತರ ನಿರೀಕ್ಷೆಗೆ ಹುಸಿಯಾಗಿದೆ. ಇದು ಕಳೆದ ಎಂಟು ವರ್ಷಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಅತಿ ಕಡಿಮೆ ಮೊತ್ತದ ಪ್ರೋತ್ಸಾಹ ಧನ. ಕಳೆದ ವರ್ಷ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಕೇಂದ್ರದ ಬೆಂಬಲ ಬೆಲೆಗೆ 425 ರೂ. ಪ್ರೋತ್ಸಾಹ ಧನ ನೀಡಿತ್ತು. ಆಗ ಕೇಂದ್ರ ಸರ್ಕಾರದ ಕ್ವಿಂಟಲ್‌ಗೆ 5675 ರೂ., ರಾಜ್ಯ ಸರ್ಕಾರದ 425 ರೂ. ಸೇರಿಸಿ 6100 ರೂ. ದರದಲ್ಲಿ ತೊಗರಿ ಖರೀದಿ ಮಾಡಲಾಗಿತ್ತು. ಈ ವರ್ಷದ ಕೇಂದ್ರದ ಬೆಂಬಲ ಬೆಲೆ 5800 ರೂ. ಇದೆ. ಇದಕ್ಕೆ ರಾಜ್ಯ ಸರ್ಕಾರ 500 ರೂ. ಪ್ರೋತ್ಸಾಹ ಧನ ನೀಡಿದ್ದರೇ 6300 ರೂ.ದರದಲ್ಲಿ ಖರೀದಿ ಮಾಡಬಹುದಿತ್ತು. ಆದರೆ ರಾಜ್ಯ ಸರ್ಕಾರ 300 ರೂ. ಮಾತ್ರ ಹೆಚ್ಚಿಸಿ ಕಳೆದ ವರ್ಷದ ದರದಲ್ಲೇ ತೊಗರಿ ಖರೀದಿ ಮಾಡಲು ನಿರ್ಧರಿಸಿದೆ.
ಕೇವಲ 10 ಕ್ವಿಂಟಲ್ ಖರೀದಿ: ಎರಡು ವರ್ಷದ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 500 ರೂ. ಪ್ರೋತ್ಸಾಹ ಧನ ನೀಡಿತ್ತು. ಪ್ರತಿ ರೈತನಿಂದ 20 ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಪ್ರಸಕ್ತವಾಗಿ ರೈತನಿಂದ ಕೇವಲ 10 ಕ್ವಿಂಟಲ್ ಖರೀದಿ ಮಾಡುವ ಕುರಿತು ಆದೇಶ ಹೊರಡಿಸಲಾಗಿತ್ತು. ಕಳೆದ ವರ್ಷ ಪ್ರತಿ ರೈತನಿಂದ 10 ಕ್ವಿಂಟಲ್ ಖರೀದಿ ಮಾಡಲಾಗಿತ್ತಾದರೂ, ಬರಗಾಲ ಹಿನ್ನೆಲೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಆದರೆ ಈ ವರ್ಷ ತೊಗರಿಗೆ ಉತ್ತಮ ಇಳುವರಿ ಬಂದಿದ್ದರಿಂದ ಕನಿಷ್ಟ 20 ಕ್ವಿಂಟಲ್ ಖರೀದಿ ಮಾಡುವಂತೆ ರೈತರು ಆಗ್ರಹಿಸಿದ್ದರು.
ಆದರೆ ಸರ್ಕಾರ ಇದ್ಯಾವುದನ್ನು ಕಿವಿಗೆ ಹಾಕಿಕೊಂಡಿಲ್ಲ. ಎರಡು ವರ್ಷದ ಹಿಂದೆ ರಾಜ್ಯದಲ್ಲಿ 32 ಲಕ್ಷ ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಆದರೆ, ಈ ವರ್ಷ ಕೇಂದ್ರ ಸರ್ಕಾರ ಕೇವಲ 18 ಲಕ್ಷ ಕ್ವಿಂಟಲ್ ಖರೀದಿಗೆ ಮಾತ್ರ ಅನುಮತಿ ನೀಡಿದೆ. ಇದರಿಂದ ರೈತರಿಗೆ ಹೊಡೆತ ಬಿದ್ದಿದೆ. ಮಾರುಕಟ್ಟೆಯಲ್ಲಿ ಈಗ ತೊಗರಿ ಕ್ವಿಂಟಲ್ ಗೆ 5100 ರೂ.ದಿಂದ 5300 ರೂ. ಇದೆ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತನಿಗೆ ಕ್ವಿಂಟಲ್
ಗೆ 1000 ರೂ. ಹೆಚ್ಚಿನ ಬೆಲೆ ಸಿಗುತ್ತದೆ.
ನಾನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 500 ರೂ. ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ನೀಡಿ ಒಟ್ಟಾರೆ 32 ಲಕ್ಷ ಕ್ವಿಂಟಲ್ ಖರೀದಿ ಮಾಡಲಾಗಿತ್ತು. ಆದರೆ ಪ್ರಸ್ತುತ ಕೇವಲ 300 ರೂ. ಪ್ರೋತ್ಸಾಹ ಧನ ನಿಗದಿ ಮಾಡಿ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಇನ್ನೂ 400 ರೂ. ಪ್ರೋತ್ಸಾಹ ಧನ ಹೆಚ್ಚಿಸಿ 6500 ರೂ. ದರದ ಜತೆಗೆ ಪ್ರತಿ ರೈತನಿಂದ 20 ಕ್ವಿಂಟಲ್ ಖರೀದಿ ಮಾಡಬೇಕು.
ಡಾ| ಶರಣಪ್ರಕಾಶ ಪಾಟೀಲ,
ಮಾಜಿ ಸಚಿವ
ಬೆಂಬಲ ಬೆಲೆಯಲ್ಲಿ ಖರೀದಿಗೆ ಸರ್ಕಾರದಿಂದ ಆದೇಶ ಬಂದಿದೆ. ಟಾಸ್ಕ್ ಫೋರ್ಸ್ ಸಭೆ ನಡೆಸಿ ನಿಯಮಾವಳಿ ರೂಪಿಸಿ, ಖರೀದಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.
ಬಿ. ಶರತ್, ಜಿಲ್ಲಾಧಿಕಾರಿ,
ಕಲಬುರಗಿ