Advertisement

ತೊಗರಿ ಸಮಸ್ಯೆಗೆ ಕ್ಯಾರೇ ಎನ್ನದ ಜನಪ್ರತಿನಿಧಿಗಳು-ಅಧಿಕಾರಿಗಳು

11:29 AM Feb 20, 2020 | Naveen |

ಕಲಬುರಗಿ: ಸರ್ಕಾರ ಅದಾ ಇಲ್ಲ ಅನ್ನಿಸ್ಲಿಕ್ಕತ್ತದ್‌, ತೊಗರಿ ರಾಶಿಯಾಗಿ ಎರಡೂವರೆ ತಿಂಗಳಾದರೂ ನಮ್ಮ ತೊಗರಿ ಖರೀದಿ ಮಾಡ್ಲಾಕ್‌ ಯಾರೂ ದಿಕ್ಕಿಲ್ಲ ಅನಸ್ಲಿಕತ್ತದ್‌. ಇಷ್ಟ ದಿನ ಆದ್ರೂ ಹೆಸರು ನೋಂದಿ¡ ಸಮಸ್ಯಾ ಬಗೆಹರಿಸಿಲ್ಲ. ಎಂಎಲ್‌ಎಗಳು ತಮ್ಮ ದಂಧೆಯಲ್ಲಿ ಮುಳುಗ್ಯಾರ್‌, ಅಧಿಕಾರಿಗಳು ತಮಗೇನೂ ಸಂಬಂಧ ಇಲ್ಲ ಎನ್ನುವಂತೆ ಇದ್ದಾರ್‌.

Advertisement

ಈ ಮಾತು ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಬ್ಬ ತೊಗರಿ ರೈತರು ವ್ಯಕ್ತಪಡಿಸುತ್ತಿರುವ ಅಳಲು ಹಾಗೂ ಆಕ್ರೋಶವಾಗಿದೆ. ಇಂದಲ್ಲ-ನಾಳೆ ಬೆಂಬಲ ಬೆಲೆಯಲ್ಲಿ ಸರಿಯಾದ ನಿಟ್ಟಿನಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತದೆ ಎಂದು ಕಳೆದೆರಡು ತಿಂಗಳಿನಿಂದ ಸಹನೆಯಿಂದ ಒಂದೊಂದು ದಿನವೂ ಒಂದು ತಿಂಗಳಿನಂತೆ ಕಾಲ ಕಳೆಯುತ್ತಿರುವ ರೈತನ ತಾಳ್ಮೆ ಕಟ್ಟೆಯೊಡೆಯುತ್ತಿದೆ. ಹೀಗಾಗಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರ್ಷಂಪ್ರತಿ ಬಹಳ ತಡವೆಂದರೆ ಜನವರಿ ಎರಡನೇ ಇಲ್ಲವೇ ಮೂರನೇ ವಾರದಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಪಾರಂಭವಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಫೆಬ್ರುವರಿ ತಿಂಗಳಿನ ಮೂರನೇ ವಾರ ಮುಗಿಯುತ್ತಿದ್ದರೂ ಖರೀದಿಯಲ್ಲಿ ಗೊಂದಲ-ಗದ್ದಲ ಮುಗಿಯುತ್ತಿಲ್ಲ. ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ ತೊಗರಿ ಬೆಳೆದ ರೈತರು ಕೈ ಸುಟ್ಟುಕೊಂಡಿದ್ದರು. ಈ ಬಾರಿ ತೊಗರಿಗೆ ಉತ್ತಮ ಇಳುವರಿ ಬಂದಿದ್ದರಿಂದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕೆಂದರೆ ಸರಿಯಾದ ನಿಟ್ಟಿನಲ್ಲಿ ಖರೀದಿ ಕೇಂದ್ರಗಳೇ ಕಾರ್ಯಾರಂಭವಾಗುತ್ತಿಲ್ಲ.

ಎಷ್ಟು ಕ್ವಿಂಟಲ್‌ ಖರೀದಿ ಎನ್ನುವ ಸಮಸ್ಯೆ: ಈ ವರ್ಷ ರೈತ ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಲು ಪಡಬಾರದ ಕಷ್ಟ ಅನುಭವಿಸಿದ. ಬೆಳೆ ದರ್ಶಕ ಆ್ಯಪ್‌, ಫ್ರೂಟ್ಸ್‌ ಆ್ಯಪ್‌ ಮತ್ತು ಭೂಮಿ ಆ್ಯಪ್‌ನ ಮಾಹಿತಿ ಆಧಾರದಡಿ ಹೆಸರು ನೋಂದಣಿ ಮಾಡಿಕೊಳ್ಳಲಾಯಿತು. ಆದರೆ ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಜಿಪಿಎಸ್‌ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಖಾಸಗಿ ಸಮೀಕ್ಷೆಕಾರರು ತೊಗರಿ ಬದಲು ಬೇರೆಯದ್ದೇ ಬೆಳೆ ಎಂದು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ಸರಿಪಡಿಸಲು ತಿಂಗಳು ಕಾಲ ಒದ್ದಾಡಿದರು. ಈಗ ಹೇಗೂ ಹೆಸರು ನೋಂದಣಿಯಾಗಿದೇ ಎಂದರೆ ಖರೀದಿಯಲ್ಲಿ ಗೊಂದಲ ಶುರುವಾಗಿದೆ.

ಇನ್ನೇನು 10 ಕ್ವಿಂಟಲ್‌ ತೊಗರಿ ಖರೀದಿ ಶುರು ಎನ್ನುವ ಹೊತ್ತಲ್ಲೇ ಕಳೆದ ಫೆ. 7ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 20 ಕ್ವಿಂಟಲ್‌ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಬೀದರ್‌ನಲ್ಲಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ರೈತರು ಸ್ವಲ್ಪ ನಿಟ್ಟಿನಲ್ಲಾದರೂ ಸಹಾಯವಾಗುವುದು ಎಂದು ಹರ್ಷಗೊಂಡರು. ಆದರೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿ 11 ದಿನಗಳಾದರೂ ಆದೇಶವಾಗಿ
ಕಾರ್ಯರೂಪಕ್ಕೆ ಬಾರದಿರುವುದು ರೈತರನ್ನು ಪಾತಾಳಕ್ಕೆ ತಳ್ಳುವಂತೆ ಮಾಡಿದೆ. ಇದು ತೊಗರಿ ರೈತರ ಬಗೆಗೆ ಸರ್ಕಾರ ಹೊಂದಿರುವ ಕಾಳಜಿ ನಿರೂಪಿಸುತ್ತಿದೆ.

Advertisement

ಈಗ 10 ಕ್ವಿಂಟಲ್‌ ಮಾತ್ರ ತೊಗರಿ ಖರೀದಿಸುತ್ತಿರುವುದರಿಂದ ರೈತರ್ಯಾರು ಖರೀದಿ ಕೇಂದ್ರಗಳಿಗೆ ಹೋಗುತ್ತಿಲ್ಲ. ಸರ್ಕಾರದ ಮೇಲೆ ವಿಶ್ವಾಸ ಹೊಂದದ ಕೆಲ ರೈತರು ಮಾತ್ರ 10 ಕ್ವಿಂಟಲ್‌ ತೊಗರಿ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈಗೊಮ್ಮೆ 10 ಕ್ವಿಂಟಲ್‌ ಮುಂದೆ ಮತ್ತೆ 10 ಕ್ವಿಂಟಲ್‌ ಗೊಮ್ಮೆ ಎರಡೆರಡು ಸಲ ಹೋಗೋದು ಬೇಡ ಎಂದು ಕೆಲ ರೈತರು ಸುಮ್ಮನಿದ್ದಾರೆ. ವರ್ಷಂಪ್ರತಿ ತೊಗರಿ ರೈತರು ಒಂದಿಲ್ಲ ಒಂದು ಸಮಸ್ಯೆ ಎದಿರಿಸುತ್ತಲೇ ಬರುತ್ತಿದ್ದಾರೆ. ಆದರೆ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಈ ವರ್ಷವಂತೂ ರಾಶಿಯಾಗಿ ಎರಡುವರೆ ತಿಂಗಳಾದರೂ ಖರೀದಿಯೇ ಆಗದಿರುವುದು ದುರಂತ ಎನ್ನುಬಹುದು ಸರಿಯಾದ ಸಮಯಕ್ಕೆ ಬಿತ್ತನೆ ಬೀಜ

ಪೂರೈಸುವಲ್ಲಿ ವಿಫಲ. ತೊಗರಿ ಬೆಂಬಲ ಬೆಲೆಯಲ್ಲಿ 125 ರೂ. ಕಡಿತ. ಪ್ರತಿ ತೊಗರಿ ಬೆಳೆಗಾರರಿಂದ 20 ಕ್ವಿಂಟಲ್‌ ತೊಗರಿ ಖರೀದಿಸುವ ವಾಗ್ಧಾನ ಈಡೇರಿಸುವಲ್ಲಿ ವಿಫಲ. ಕೆಕೆಆರ್‌ಡಿಬಿಗೆ ಅಧ್ಯಕ್ಷರನ್ನು ನೇಮಿಸುವಲ್ಲಿ ವಿಳಂಬ. ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಲ್ಲಿ ಮಾತು ತಪ್ಪಿರುವುದು. ಇನ್ವೆಸ್ಟ್‌ ಕರ್ನಾಟಕದ ಕೈಗಾರಿಕಾ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ. ಹೀಗೆ ಹಲವಾರು ರೀತಿಯಲ್ಲಿ ಈ ಭಾಗಕ್ಕೆ ಅನ್ಯಾಯವಾಗುತ್ತಿದೆ.
ಪ್ರಿಯಾಂಕ್‌ ಖರ್ಗೆ,
ಶಾಸಕ, ಚಿತ್ತಾಪುರ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next