ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೆಲೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕುಸಿತವಾಗಿದ್ದರೂ ಸರ್ಕಾರ ಮಧ್ಯಪ್ರವೇಶಿಸಿ ಖರೀದಿ ಮಾಡಲು ಹಿಂದೇಟು ಹಾಕಿರುವುದರಿಂದ ಬರ-ಪ್ರವಾಹದ ನಡುವೆ ಬೆಳೆದಿದ್ದ ತೊಗರಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ನಿಗದಿತ ಸಮಯದೊಳಗೆ ಖರೀದಿ ಆರಂಭವಾಗಿದ್ದರೆ ಇಷ್ಟೋತ್ತಿಗೆ ಶೇ.80ರಷ್ಟು ಖರೀದಿ ಪ್ರಕ್ರಿಯೆ ಮುಗಿಯುತ್ತಿತ್ತು. ಆದರೆ ಸರ್ಕಾರಕ್ಕೆ, ಈ ಭಾಗದ ಜನಪ್ರತಿನಿಧಿಗಳಿಗೆ ತೊಗರಿ ಬಗ್ಗೆ ಎಳ್ಳು ಕಾಳಷ್ಟು ಕಾಳಜಿ ಇಲ್ಲದಂತೆ ತೋರುತ್ತಿದೆ.
ಕಳೆದ ಡಿಸೆಂಬರ್ ಎರಡನೇ ವಾರದಿಂದಲೇ ತೊಗರಿ ಮಾರುಕಟ್ಟೆಗೆ ಆರಂಭವಾಗಿದೆ. ಕೇಂದ್ರ ಸರ್ಕಾರ 2019, ಡಿ.18ರಂದೇ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರ ತನ್ನ ಪ್ರೋತ್ಸಾಹ ಧನ ನಿಗದಿ ಮಾಡಲು 10 ದಿನಗಳ ಕಾಲ ಸಮಯ ತೆಗೆದುಕೊಂಡಿತು. ಕೇಂದ್ರದ 5800 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಕೇವಲ 300 ರೂ. ಪ್ರೋತ್ಸಾಹ ಧನ ನಿಗದಿ ಮಾಡಿ, ಕೇವಲ 10 ಕ್ವಿಂಟಲ್‌ಗೆ ಮಿತಿ ಹೇರಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರೋತ್ಸಾಹ ಧನ 500 ರೂ. ನೀಡಲಾಗಿತ್ತು. ಪ್ರೋತ್ಸಾಹ ಧನ ಕಡಿಮೆಯಾದರೂ ಪರವಾಗಿಲ್ಲ. ಬೇಗ ಖರೀದಿ ಆರಂಭವಾದರೆ ಕೆಲವು ರೈತರಿಗಾದರೂ ಅನುಕೂಲವಾಗುತ್ತದೆ ಎನ್ನುವುದು ರೈತರ ಅಳಲಾಗಿದೆ.
ದರ ಹೇಗಿದೆ?: ಮಾರುಕಟ್ಟೆಯಲ್ಲಿ ತೊಗರಿ ಕ್ವಿಂಟಲ್‌ಗೆ ಕೇವಲ 4500ರಿಂದ 4800 ರೂ.ಗೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆ ಕ್ವಿಂಟಲ್‌ಗೆ 6100 ರೂ. ಇದೆ. ಹೀಗಾಗಿ ರೈತ ಪ್ರತಿ ಕ್ವಿಂಟಲ್‌ಗೆ 1500 ರೂ. ನಷ್ಟ ಅನುಭವಿಸಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ರೈತರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ 165 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದೊಂದು ತಿಂಗಳಿನಿಂದ ಕೇವಲ ನೋಂದಣಿ ಮಾಡಿಕೊಳ್ಳುವುದರಲ್ಲೇ ಕಾಲಹರಣ ಮಾಡಲಾಗುತ್ತಿದೆ.
ತೊಗರಿಗೆ ಕಿಮ್ಮತ್ತಿಲ್ಲ!
ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ 40 ಕ್ವಿಂಟಲ್, ರಾಗಿ 50 ಕ್ವಿಂಟಲ್ ಖರೀದಿಗೆ ನಿರ್ಧರಿಸಿದ್ದರೆ ತೊಗರಿಯನ್ನು ಕೇವಲ 10 ಕ್ವಿಂಟಲ್ ಖರೀದಿಸಲು ನಿರ್ಧರಿಸಿರುವುದು ಶೋಷಣೆಗೆ ಹಿಡಿದ ಮತ್ತೊಂದು ಕನ್ನಡಿಯಾಗಿದೆ.
ಹಣಮಂತರಾವ ಭೈರಾಮಡಗಿ