ಕಲಬುರಗಿ: ಪ್ರಸಕ್ತ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಹವಾಮಾನ ವೈಪರೀತ್ಯದಿಂದ ನಷ್ಟವಾದಲ್ಲಿ ಸೂಕ್ತ ಬೆಳೆ ವಿಮೆ ಪರಿಹಾರವಿಲ್ಲ!
Advertisement
ಸಂಪೂರ್ಣ ಸಾಲ ಮನ್ನಾ ಆಗದ ಹಾಗೂ ಹೊಸದಾಗಿ ಸಾಲ ಇರದೇ ಇರುವುದರಿಂದ ರೈತರ್ಯಾರೂ ಬೆಳೆವಿಮೆ ಮಾಡಿಸಲು ಆಗುತ್ತಿಲ್ಲ. ಹೀಗಾಗಿ ಈ ವರ್ಷ ಮುಂಗಾರು ಹಂಗಾಮಿನ ಬೆಳೆಗಳು ಹಾನಿಗೊಳಗಾಗಿದ್ದರೂ ರೈತನಿಗೆ ಬೆಳೆವಿಮೆ ಪರಿಹಾರ ಇಲ್ಲದಾಗಿದೆ.
Related Articles
Advertisement
ಕಾರಣ ಏನು?: ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಹಕಾರಿ ಸಂಘಗಳಲ್ಲಿ ಮಾಡಿರುವ ಒಂದು ಲಕ್ಷ ರೂ. ವರೆಗಿನ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎರಡು ಲಕ್ಷ ರೂ. ಸಾಲ ಸಂಪೂರ್ಣ ಮನ್ನಾ ಆಗಿರುವುದು ಜತೆಗೆ ಹೊಸದಾಗಿ ಒಬ್ಬನೇ ಒಬ್ಬ ರೈತನಿಗೆ ಸಾಲ ಸಿಗದೇ ಇರುವುದೇ ಬೆಳೆವಿಮೆಗಾಗಿ ಪ್ರಿಮಿಯಂ ತುಂಬದಿರುವುದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರತಿವರ್ಷ ಬೆಳೆಸಾಲ ನವೀಕರಣ ಮಾಡುವಾಗ ಸಹಕಾರಿ ಸಂಘಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆವಿಮೆ ಪ್ರಿಮಿಯಂ ಹಣ ಮುರಿದುಕೊಂಡೇ ಸಾಲ ನೀಡಲಾಗುತ್ತಿತ್ತು. ಇಲ್ಲವೇ ಸಾಲ ನವೀಕರಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಸಾಲ ಪಡೆದ ರೈತರೆಲ್ಲರೂ ಬೆಳೆವಿಮೆ ಮಾಡಿಸಿದಂತಾಗುತ್ತಿತ್ತು. ಆದರೆ ಪ್ರಸಕ್ತವಾಗಿ ರೈತರ ಸಂಪೂರ್ಣ ಸಾಲ ಮನ್ನಾ ಆಗಿಲ್ಲ. ಮನ್ನಾ ಆಗಿದ್ದರೂ ಹೊಸದಾಗಿ ಸಾಲ ಸಿಕ್ಕಿಲ್ಲ. ಹೀಗಾಗಿ ರೈತರ್ಯಾರು ಪ್ರಿಮಿಯಂ ಹಣ ತುಂಬಿ ಬೆಳೆವಿಮೆ ಮಾಡಿಸುತ್ತಿಲ್ಲ. ಇದೇ ಕಾರಣಕ್ಕೆ ಪ್ರಸಕ್ತವಾಗಿ ಶೇ.80ರಷ್ಟು ರೈತರು ಬೆಳೆವಿಮೆಯಿಂದ ಹೊರಗುಳಿಯುತ್ತಿದ್ದಾರೆ.
ರೈತರ ನಿರಾಸಕ್ತಿಗೆ ಕಾರಣ: ಮಳೆ ಕಡಿಮೆಯಾಗಿ ಇಲ್ಲವೇ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದಾಗ ಸೂಕ್ತ ಪರಿಹಾರದ ನಿಟ್ಟಿನಲ್ಲಿ ಬರುವುದೇ ಬೆಳೆ ವಿಮೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕನ್ನಡಿಯೊಳಗಿನ ಗಂಟಾಗುತ್ತಿದೆ. ಬೆಳೆ ನಷ್ಟವಾದಾಗ ಪರಿಹಾರ ರೂಪದಲ್ಲಿ ಬೆಳೆವಿಮೆ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ.
ಕಳೆದ ವರ್ಷ ಹೈದ್ರಾಬಾದ್ ಕರ್ನಾಟಕ ಭಾಗದಾದ್ಯಂತ ಭೀಕರ ಬರಗಾಲ ಬಿದ್ದು, ಯಾವುದೇ ಬೆಳೆಗಳು ಕೈಗೆ ಬರಲಿಲ್ಲ. 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಕಲಬುರಗಿ ಜಿಲ್ಲೆಯಲ್ಲಿ ಕೇವಲ 10 ಕೋಟಿ ರೂ. ಮಾತ್ರ ಬೆಳೆವಿಮೆ ಮಂಜೂರಾಗಿದೆ. ಆದರೆ ಬೆಳೆಹಾನಿ ಅವಲೋಕಿಸಿದರೆ ಜಿಲ್ಲೆಗೆ ಕನಿಷ್ಟ 150 ಕೋಟಿ ರೂ. ಬೆಳೆವಿಮೆ ಮಂಜೂರಾಗಬೇಕಿತ್ತು. ಬೆಳೆವಿಮೆ ನೆಪದಲ್ಲಿ ವಿಮಾ ಕಂಪನಿಗೆ ಹಣ ಮಾಡಿಕೊಡುವ ದಂಧೆಯಾಗಿದೆ ಎನ್ನುವುದು ರೈತರ ಆರೋಪ.
ಸರ್ಕಾರ ಕೆಲವೊಂದಕ್ಕೆ ಅನಗತ್ಯವಾಗಿ ಸಬ್ಸಿಡಿಗೆಂದು ಕೋಟ್ಯಂತರ ರೂ. ಖರ್ಚು ಮಾಡುವುದು ಹಾಗೂ ಸಾಲ ಮನ್ನಾ ಮಾಡಿ ಗೊಂದಲಕ್ಕೆ ಒಳಗಾಗುವ ಬದಲು ಬೆಳೆ ಹಾನಿಯಾದಾಗ ಸೂಕ್ತ ಬೆಳೆವಿಮೆ ಪರಿಹಾರ ದೊರಕಲು ಹಾಗೂ ಸರ್ಕಾರವೇ ರೈತರ ಬೆಳೆವಿಮೆ ಪ್ರಿಮಿಯಂ ತುಂಬುವಂತಹ ಯೋಜನೆ ಕಾರ್ಯರೂಪಕ್ಕೆ ತರುವುದು ಹೆಚ್ಚು ಸೂಕ್ತ. ಹೀಗಾದಲ್ಲಿ ವಿಮಾ ಕಂಪನಿಗಳ ಹಗಲು ದರೋಡೆ ನಿಲ್ಲಲು ಸಾಧ್ಯವಾಗುತ್ತದೆ.•ಜಗದೇವಪ್ಪ ಪಾಟೀಲ, ರೈತ ಬೆಳೆವಿಮೆಗೆ ಕೇವಲ ನಾಲ್ಕು ದಿನಗಳು ಮಾತ್ರ ಇರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ಮಾಡಿಸಲು ಅನುಕೂಲವಾಗಲು ಆ.15ರವರೆಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಹಾಗೂ ವಿಮಾ ಕಂಪನಿಗಳಿಗೆ ಪತ್ರ ಬರೆಯಲಾಗಿದೆ.
•ರತೇಂದ್ರನಾಥ ಸುಗೂರ,
ಜಂಟಿ ಕೃಷಿ ನಿರ್ದೇಶಕರು ಕಲಬುರಗಿ