ಕಲಬುರಗಿ: ಕಳೆದ 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮಂಜೂರಾತಿಯಲ್ಲಿ ಲೋಪದೋಷ ಸಾಬೀತಾದಂತಾಗಿದ್ದು, ಇದರಿಂದ ರೈತರು ಶೋಷಣೆಗೆ ಒಳಗಾದಂತಾಗಿದೆ.
Advertisement
ಕಳೆದ ವರ್ಷ ಭೀಕರ ಬರಗಾಲ ಎದುರಾಗಿ ಯಾವುದೇ ಬೆಳೆಗಳು ಕೈಗೆ ಬಾರದೇ ನಷ್ಟವಾಗಿರುವುದು ಸತ್ಯವಾಗಿದೆ. ಕಳೆದ ವರ್ಷದ ಬೆಳೆ ಹಾನಿ ಅವಲೋಕಿಸಿದರೆ ಕಲಬುರಗಿ ಜಿಲ್ಲೆಯಲ್ಲಿರುವ 220 ಗ್ರಾಪಂಗಳಲ್ಲಿ ಪ್ರತಿ ಗ್ರಾಪಂಗೆ ಕನಿಷ್ಠ ಒಂದು ಕೋಟಿ ರೂ.ದಂತೆ ಕನಿಷ್ಠ 200 ಕೋಟಿ ರೂ. ಬೆಳೆವಿಮೆ ಮಂಜೂರಾಗಬೇಕಿತ್ತು. ಆದರೆ ಕೇವಲ 12 ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ.
Related Articles
Advertisement
ಲೋಪಕ್ಕೆ ಶಿಕ್ಷೆ ಏನು: ಕಳೆದ ವರ್ಷ ಬೆಳೆ ವಿಮೆ ಮಂಜೂರಾಗುವಲ್ಲಿ ಲೋಪದೋಷವಾಗಿದೆ. ಬೆಳೆ ಇಳುವರಿ ಪ್ರಮಾಣ (ಕ್ರಾಪ್ ಕಟಿಂಗ್ ಎಕ್ಸ್‌ಪಿರಿಮೆಂಟ್) ಸರಿಯಾಗಿ ಮಾಡದಿರುವ ಹಿನ್ನೆಲೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಆದರೆ ಸರಿಯಾದ ವರದಿ ರೂಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ, ಜಿಲ್ಲಾದ್ಯಂತ ನಡೆಸಲಾದ ಒಂದು ಸಾವಿರ ಕ್ಷೇತ್ರಗಳಲ್ಲಿನ ಬೆಳೆ ಇಳುವರಿ ಪ್ರಮಾಣ (ಕ್ರಾಪ್ ಕಟಿಂಗ್ ಎಕ್ಸ್‌ಪಿರಿಮೆಂಟ್) ನಿಗದಿಯಲ್ಲಿ ಸುಮಾರು 900 ಕ್ಷೇತ್ರಗಳ ವರದಿ ವಾಸ್ತವವಾಗಿ ಮಾಡದೇ ಬೇಕಾಬಿಟ್ಟಿ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಹೀಗಾಗಿ ಸಂಬಂಧಪಟ್ಟ 900 ಕ್ಷೇತ್ರಗಳಲ್ಲಿನ ಬೆಳೆ ಇಳುವರಿ ಪ್ರಮಾಣ (ಕ್ರಾಪ್ ಕಟಿಂಗ್ ಎಕ್ಸ್‌ಪಿರಿಮೆಂಟ್) ನಿಖರವಾಗಿ ಅಳೆದು ಅದನ್ನು ವರದಿಯಲ್ಲಿ ಉಲ್ಲೇಖಸದ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ರೈತರಿಗೆ ನಷ್ಟವಾಗಿರುವ ಸುಮಾರು 200 ಕೋಟಿ ರೂ. ಇವರಿಂದ ವಸೂಲಾತಿ ಮಾಡಿದಾಗ ಮಾತ್ರ ಮುಂದೆ ಇಂತಹ ಶೋಷಣೆ -ಅನ್ಯಾಯ ತಪ್ಪಿಸಬಹುದಾಗಿದೆ.
ಬೆಳೆ ಇಳುವರಿ ಪ್ರಮಾಣ (ಕ್ರಾಪ್ ಕಟಿಂಗ್ ಎಕ್ಸ್‌ಪಿರಿಮೆಂಟ್)ವನ್ನು ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿಗೊಳಿಸಲಾದ ಕ್ಷೇತ್ರಗಳಿಗೆ ಹೋಗಿ ಇಳುವರಿ ವರದಿ ರೂಪಿಸಬೇಕು. ಆದರೆ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಿಬ್ಬಂದಿ ಮಾಡಿದ್ದು ಅವಾಂತರ ಹಾಗೂ ಕರ್ತವ್ಯಲೋಪಕ್ಕೆ ಕಾರಣವಾಗಿದೆ. ಒಟ್ಟಾರೆ ಬೆಳೆ ವಿಮೆ ಕಂಪನಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ರೈತರಿಗೆ ಬೆಳೆ ವಿಮೆ ಎಂಬುದನ್ನು ಕನ್ನಡಿಯೊಳಗಿನ ಗಂಟಾಗಿ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ.
ಬೆಳೆ ವಿಮೆ ಮಂಜೂರಾತಿ ಸಮರ್ಪಕವಾಗಿಲ್ಲ. ಸಂಪೂರ್ಣ ಲೋಪವಾಗಿದೆ. ತಮ್ಮ ಕ್ಷೇತ್ರದ ಎರಡು ಹಳ್ಳಿಗಳಿಗೆ ಬೆಳೆ ಹಾನಿಗೆ ತಕ್ಕ ನಾಲ್ಕು ಕೋಟಿ ರೂ. ಬೆಳೆ ವಿಮೆ ಮಂಜೂರಾಗಿರುವುದು ಸಂತಸವಾಗಿದೆ. ಆದರೆ ಅದೇ ಗ್ರಾಮದ ಪಕ್ಕದ ಹಳ್ಳಿಗಳಿಗೆ ನಯಾಪೈಸೆ ಬಿಡುಗಡೆ ಆಗದಿರುವುದು ಶೋಷಣೆಗೆ ಹಿಡಿದ ಕನ್ನಡಿಯಾಗಿದೆ. ಎಲ್ಲ ರೈತರಿಗೂ ನ್ಯಾಯ ಸಿಗಲು ಮಗದೊಮ್ಮೆ ಸಮೀಕ್ಷೆ ರೂಪಿಸಿ ಬೆಳೆ ಹಾನಿಗೆ ತಕ್ಕ ಪರಿಹಾರ ಸಿಗಬೇಕು.•ಎಂ.ವೈ. ಪಾಟೀಲ,
ಶಾಸಕ, ಅಫಜಲಪುರ ಮುಖ್ಯಮಂತ್ರಿ ಗಮನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಹಂಗಾಮಿನ ಬೆಳೆ ವಿಮೆ ಮಂಜೂರಾತಿಯಲ್ಲಿ ಅನ್ಯಾಯ ಹಾಗೂ ಲೋಪದೋಷ ಆಗಿರುವುದನ್ನು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ತರಲಾಗಿದೆ. ಅವರು ಮರು ಸಮೀಕ್ಷೆ ಬಗ್ಗೆ ಒಲವು ಹೊಂದಿದ್ದಾರೆ. ತಾವು ಮನವಿ ಸಲ್ಲಿಸುವ ಮುಂಚೆಯೇ ಕಲಬುರಗಿ ಜಿಲ್ಲೆಗೆ ಬೆಳೆ ವಿಮೆ ಮಂಜೂರಾತಿಯಲ್ಲಿ ಲೋಪವಾಗಿರುವುದು ಗಮನದಲ್ಲಿದೆ. ಹೀಗಾಗಿ ರೈತರಿಗೆ ನ್ಯಾಯ ದೊರಕುವ ವಿಶ್ವಾಸವಿದೆ.
•ಸಿದ್ರಾಮಪ್ಪ ಪಾಟೀಲ ಧಂಗಾಪುರ,
ಅಧ್ಯಕ್ಷರು ಜಿಲ್ಲಾ ಕೃಷಿಕ ಸಮಾಜ