ಕಲಬುರಗಿ: ಕೋವಿಡ್ ತಪಾಸಣೆಗೆ ಹೆದರಿ ಪೋಲೀಸರಿಂದ ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ಮಹಡಿ ಮೇಲಿಂದ ಬಿದ್ದು ಓರ್ವ ಕೈದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡ ರಾತ್ರಿ ಜಿಮ್ಸ್ ಆವರಣದಲ್ಲಿ ನಡೆದಿದೆ.
ಮೃತನನ್ನು ಶೇಖ ಜಾವೇದ್ ಅಲಿಯಾಸ್ ಮುನ್ನಾ ಎಂದು ಗುರುತಿಸಲಾಗಿದೆ.
ಈತ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ. ಎಂಟು ತಿಂಗಳ ಹಿಂದೆ ಇತನ ಸಹೋದರ ನಗರದ ಪಬ್ಲಿಕ್ ಗಾರ್ಡನ್ ದಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಓಡುವ ಭರಾಟೆ ಯಲ್ಲಿ ಜೆಡಿಎಸ್ ಕಚೇರಿಯ ಸಮೀಪದಲ್ಲಿ ಇರುವ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಈಗ ಆತನ ಸಹೋದರ ಮುನ್ನಾ ಜಿಮ್ಸ್ ಆಸ್ಪತ್ರೆ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ.
ಮುನ್ನಾ ಕಳವು ಇನ್ನಿತರ ಕೇಸ್ ನಲ್ಲಿ ಜಾಮೀನು ಪಡೆದು ನಂತರ ಕೋರ್ಟ್ ಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಬಂಧನಕ್ಕಾಗಿ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಶುಕ್ರವಾರ ಆರೋಗ್ಯ ತಪಾಸಣೆ ಮಾಡಿಸಲು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ವೈದ್ಯರು ತಪಾಸಣೆ ಮಾಡಿದ ಬಳಿಕ ಕೋವಿಡ್ ಟೆಸ್ಟ್ ಮಾಡಲು ಕರೊನಾ ವಾರ್ಡ ಕಡೆಗೆ ಪೊಲೀಸರು ಆತನನ್ನು ಕರೆದುಕೊಂಡು ಹೋಗುವಾಗ ಅವರಿಂದ ತಪ್ಪಿಸಿಕೊಂಡು ಓಡಲು ಶುರುವಿಟ್ಟಿದ್ದಾನೆ. ಆಸ್ಪತ್ರೆ ಮಹಡಿಯನ್ನು ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ ಮೇಲಂತಸ್ತಿನಿಂದ ಕೆಳಗೆ ಜಿಗಿದಿದ್ದಾನೆ. ಕೆಳಗೆ ಮೆಟ್ಟಿಲು ಇದ್ದ ಕಾರಣ ಭಾರಿ ಪ್ರಮಾಣದ ಗಾಯಗಳಾಗಿವೆ ಎಂದು ದವಾಖಾನೆ ಮೂಲಗಳು ತಿಳಿಸಿವೆ.
ಕೂಡಲೇ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸಿಲ್ಲ ಎಂದು ಗೊತ್ತಾಗಿದೆ.
ಸ್ಥಳಕ್ಕೆ ಎಸಿಪಿ ಗಿರೀಶ ಎಸ್.ಬಿ., ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.