Advertisement

ಅಂದುಕೊಂಡಂತೆ ಬದುಕಲು ಗುರಿ ಹೊಂದಿ

03:33 PM Nov 16, 2019 | Naveen |

ಕಲಬುರಗಿ: ನಾವು ಜೀವನದಲ್ಲಿ ಹೇಗೆ ಇರಬೇಕೆಂದು ಭಾವಿಸುತ್ತೇವೆಯೋ ಹಾಗೆ ಇರುತ್ತೇವೆ. ಮೊದಲು ನಾವು ಏನಾಗಬೇಕು ಎಂಬ ಸ್ಪಷ್ಟ ಗುರಿ ಹೊಂದಬೇಕು ಎಂದು ಥಟ್‌ ಅಂತ ಹೇಳಿ ಖ್ಯಾತಿಯ ಡಾ| ನಾ. ಸೋಮೇಶ್ವರ ಹೇಳಿದರು.

Advertisement

ನಗರದ ಬಂಗರಗಾ ಕಲ್ಯಾಣ ಮಂಟಪದಲ್ಲಿ ನಡೆದ ಜಸ್ಟಿಸ್‌ ಶಿವರಾಜ ವಿ. ಪಾಟೀಲ ಫೌಂಡೇಶನ್‌, ವಿದ್ಯಾರ್ಥಿ ಸೇವಾ ಪ್ರತಿಷ್ಠಾನ, ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸಿಕ್ರೇಟ್‌ ಟು ಸಕ್ಸಸ್‌ ಯಶಸ್ಸಿನ ಗುಟ್ಟು ಹಾಗೂ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಅಂಕಗಳಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಬೇಕು. ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವಂತೆ ಓದಬೇಕು. ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲ. ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದಾಗ ಯಶಸ್ಸು ಸಾಧ್ಯ. ಒಂದು ಸಲ ಕೇಳಿದರೆ ಎಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಓದಿನಲ್ಲಿ ಆಸಕ್ತಿ ಇರಬೇಕು. ಯಾವುದೇ ವಿಷಯವನ್ನು ಪ್ರೀತಿಸಿದಾಗ ಓದಿನಲ್ಲಿ ಆಸಕ್ತಿ ಹೆಚ್ಚಾಗಿ ಎಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಗತ್ತಿನಲ್ಲಿ ಯಾರು ದಡ್ಡರಲ್ಲ, ಎಲ್ಲರೂ ಬುದ್ಧಿವಂತರು. ನಾನು ದಡ್ಡ ಎನ್ನುವ ಕೀಳರಿಮೆ ಇದ್ದರೆ ಅದನ್ನು ಈಗಲೇ ಕಿತ್ತೆಸೆಯಿರಿ. ಮನುಷ್ಯ ಪಕ್ಷಪಾತ ಮಾಡಬಹುದು, ಪ್ರಕೃತಿ ಪಕ್ಷಪಾತ ಮಾಡುವುದಿಲ್ಲ. ಪ್ರಕೃತಿಯು ಯಾವುದೇ ಜಾತಿ, ಜನಾಂಗ, ಧರ್ಮ, ಸ್ತ್ರೀ-ಪುರುಷ, ಶ್ರೀಮಂತ ಬಡವನಿರಲಿ ಎಲ್ಲರಿಗೂ ಒಂದೇ ರೀತಿಯ ನರಕೋಶಗಳನ್ನು ನೀಡಿದೆ. ಹುಟ್ಟುತ್ತಾ ನಾವೆಲ್ಲ ಒಂದೇ ಆಗಿರುತ್ತೇವೆ. ಮುಂದೆ ಬೆಳೆಯುವ ಹಂತದಲ್ಲಿ ಭಿನ್ನವಾಗುತ್ತೇವೆ. ಅದಕ್ಕೆ ಕಾರಣ ಮನೆ ಪರಿಸರ ಎಂದು ಹೇಳಿದರು.

ತಮ್ಮನ್ನು ದೂರದ ಬೆಂಗಳೂರಿನಿಂದ ಕರೆಸಿ ಇಲ್ಲಿನ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಇಂತಹ ಉಪಯುಕ್ತವಾದ ಕಾರ್ಯಕ್ರಮ ಮಾಡುತ್ತಿರುವ ಜಸ್ಟಿಸ್‌ ಡಾ| ಶಿವರಾಜ ವಿ. ಪಾಟೀಲ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.

Advertisement

ಖ್ಯಾತ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ವಿಡಿಯೋ ಮುಖಾಂತರ ಶುಭ ಸಂದೇಶ ನೀಡುತ್ತಾ, ಯಶಸ್ಸು ಎಂದರೆ ಹಣ ಅಲ್ಲ. ಅ ಧಿಕಾರ, ಅಂತಸ್ತು, ದೇಹ ದಾರ್ಡ್ಯತೆ ಅಲ್ಲ. ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದಾಗ ಸಿಗುವ ತೊಷವೇ ಜೀವನದ ಯಶಸ್ಸು ಎಂದು ಹೇಳಿದರು.

ಸರ್ವಜ್ಞ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಭಿಷೇಕ ಸಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೀಳರಿಮೆ ಬಿಟ್ಟು ಓದಿದಾಗ ಅಖೀಲ ಭಾರತ ಮಟ್ಟದ ಉನ್ನತ ಮಟ್ಟದ ಸಂಸ್ಥೆಗಳಲ್ಲಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಂಡು ದೇಶಕ್ಕೆ ಕೊಡುಗೆ ಕೊಡಬೇಕು ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ ಮಾತನಾಡಿದರು. ನಂತರ ಡಾ| ನಾ. ಸೋಮೇಶ್ವರ ಅವರು ವಿದ್ಯಾರ್ಥಿಗಳಿಗಾಗಿ ಸೈನ್ಸ್‌ ಕ್ವಿಜ್‌ ಕಾರ್ಯಕ್ರಮ ನಡೆಸಿಕೊಟ್ಟರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಸ್ಥೆ ಸಂಸ್ಥಾಪಕ ಪ್ರೊ| ಚನ್ನಾರಡ್ಡಿ ಪಾಟೀಲ, ಜಸ್ಟಿಸ್‌ ಶಿವರಾಜ ಪಾಟೀಲ ಫೌಂಡೇಶನ್‌ ಉಪಾಧ್ಯಕ್ಷರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶಎಸ್‌.ಎಂ.
ರೆಡ್ಡಿ, ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ, ಉಪಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ನಿವೃತ್ತ ಪ್ರಾಚಾರ್ಯ ಪ್ರಭುಗೌಡ ಸಿದ್ಧರೆಡ್ಡಿ, ಶೈಕ್ಷಣಿಕ ನಿರ್ದೇಶಕ ಪೃಥ್ವಿರಾಜ್‌ಗೌಡ, ಕರುಣೇಶ ಹಿರೇಮಠ, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ವಿನುತಾ ಆರ್‌.ಬಿ., ಡಾ| ಸಂತೋಷಕುಮಾರ ನಾಗಲಾಪುರ ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು. ಸರ್ವಜ್ಞ ಚಿಣ್ಣರ ಲೋಕದ ಮಕ್ಕಳು ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next