ಕಲಬುರಗಿ: ರಸ್ತೆಬದಿ, ರೈಲು ನಿಲ್ದಾಣ, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಾಣೆಯಾದ ಪ್ರಕರಣದಲ್ಲಿ ಮಕ್ಕಳು ಸಿಕ್ಕಲ್ಲಿ ಕೂಡಲೇ ಎಫ್.ಐ.ಆರ್ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚೈಲ್ಡ್ಲೈನ್ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಮಕ್ಕಳು ಸಿಕ್ಕ ವಿಷಯ ಕುರಿತು ಎಫ್.ಐ.ಆರ್. ದಾಖಲಿಸಿದಲ್ಲಿ ಅದು ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ಅದಲ್ಲದೇ ಚೈಲ್ಡ್ಲೈನ್ ರಾಷ್ಟ್ರೀಯ ವೆಬ್‌ಸೈಟ್‌ಗೂ ಮಾಹಿತಿ ಅಪಡೇಟ್ ಆಗುವುದರಿಂದ ಎಲ್ಲೆಡೆ ಮಾಹಿತಿ ಹೋಗುತ್ತದೆ. ಇದರಿಂದ ಮಕ್ಕಳನ್ನು ಕಳೆದುಕೊಂಡ ಪೋಷಕ-ಪಾಲಕರ ಮಡಿಲಿಗೆ ಮಕ್ಕಳು ಸೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಜಿಲ್ಲೆಯ ಎಲ್ಲ ಶಾಲೆಗಳಲ್ಲಿ 1098 ಚೈಲ್ಡ್ಲೈನ್ ಕುರಿತು ಅರಿವು ಮೂಡಿಸುವ ಗೋಡೆ ಬರಹವನ್ನು ಕಡ್ಡಾಯವಾಗಿ ಬರೆಯಬೇಕು. ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ದಾಖಲಾಗುವ ಪ್ರಕರಣಗಳ ಸಮನ್ವಯತೆ ಸಾಧಿಸಲು ಹಾಗೂ ಈ ಬಗ್ಗೆ ಪ್ರತಿ ತಿಂಗಳು ಮುಗಿದ ನಂತರ 5ನೇ ತಾರಿಖೀನ ಒಳಗೆ ವರದಿ ನೀಡಲು ಚೈಲ್ಡ್ಲೈನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಕ್ರೈಂ ಬ್ರ್ಯಾಂಚ್ ಪೊಲೀಸ್ ಅವರಿಗೆ ಪತ್ರ ಬರೆಯುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯಗೆ ಸೂಚನೆ ನೀಡಿದರು.
ಆಳಂದ ತಾಲೂಕಿನ ಖಾನಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಕಾಲ ಶಾಲೆಯನ್ನು ಬಂದ್ ಮಾಡಲಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸೂರ್ಯಕಾಂತ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ| ಪಿ. ರಾಜಾ, ಶಿಕ್ಷಕರ ವರ್ಗಾವಣೆ ನಿರಂತರ ಪ್ರಕ್ರಿಯೆಯಾಗಿರುತ್ತದೆ. ವರ್ಗಾವಣೆ ಕಾರಣವೊಡ್ಡಿ ಶಾಲೆ ಬಂದ್ ಮಾಡುವುದು ಕಾನೂನಿಗೆ ವಿರುದ್ಧವಾದದ್ದು. ಶಾಲೆ ಬಂದ್‌ಗೆ ಒತ್ತಾಯ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ಕುರಿತಂತೆ ಇದೂವರೆಗೆ ಶಾಲೆಗೆ ಭೇಟಿ ನೀಡದ ಡಿಡಿಪಿಐ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೀನಾ ಡಿಸೋಜಾ, ಡಿಹೆಚ್ಒ ಡಾ| ಮಾಧವರಾವ್ ಕೆ.ಪಾಟೀಲ, ಡಾನ್ ಬಾಸ್ಕೋ ಸಂಸ್ಥೆ ಫಾದರ್ ಸಜಿತ್, ತಾಲೂಕಿನ ಸಿಡಿಪಿಒಗಳು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.