Advertisement

ಜನರ ಬಳಿ ತೆರಳಿ ಸಮಸ್ಯೆ ಅರಿಕೆ

01:30 PM Jul 06, 2019 | Team Udayavani |

ಕಲಬುರಗಿ: ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ನ್ಯಾಯ ದೊರಕಿಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂವಿಧಾನ ಬದ್ಧವಾಗಿ ಶ್ರಮಿಸುತ್ತಿದ್ದು, ಮಕ್ಕಳ ಸಮಸ್ಯೆ ಅರಿಯಲು ಜನರ ಬಳಿಯೇ ಹೋಗಿ ವಿಚಾರಣೆ ನಡೆಸುವ ವಿನೂತನ ಪ್ರಯೋಗ ಹಾಕಿಕೊಂಡಿದೆ ಎಂದು ಆಯೋಗದ ಸದಸ್ಯೆ ಪ್ರಜ್ಞಾ ಪರಂಡೆ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎನ್‌ಸಿಪಿಸಿಆರ್‌, ಕಲಬುರಗಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಲಬುರಗಿ ವಿಭಾಗ ಮಟ್ಟದ ಆರು ಜಿಲ್ಲೆಗಳ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ ಆರಂಭಕ್ಕೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಮಕ್ಕಳು ಮತ್ತು ಪೋಷಕರ ಮಧ್ಯೆ ಸಂಬಂಧ ಹಳಸಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಮಕ್ಕಳಿಗೆ ಅವರ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿ ಹೇಳುವುದು ಪಾಲಕರು-ಪೋಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಆಯೋಗವು ಪ್ರಯೋಗಾತ್ಮಕವಾಗಿ ಜನರ ಬಳಿಯೇ ಹೋಗಿ ಅಹವಾಲು ಮತ್ತು ಅರ್ಜಿಗಳನ್ನು ಸ್ವೀಕರಿಸಿ ವಿಚಾರಣೆ ನಡೆಸುತ್ತಿದೆ ಎಂದರು.

ರಾಷ್ಟ್ರೀಯ ಆಯೋಗ ನಡೆಸುವ ವಿಚಾರಣೆಯ ಸಾಧಕ-ಬಾಧಕ ನೋಡಿ ಕರ್ನಾಟಕದ ಇತರೆ ಜಿಲ್ಲೆಯಲ್ಲಿಯೂ ಪೀಠದ ವಿಚಾರಣೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮುಂದಾಗಬೇಕು ಎಂದು ಸಲಹೆ ನೀಡಿದರು.

ಮತ್ತೂಬ್ಬ ಸದಸ್ಯ ಡಾ| ಆರ್‌.ಜಿ. ಆನಂದ ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ ಮಕ್ಕಳು, ಪಾಲಕರು-ಪೋಷಕರು ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ದುಡಿಯುತ್ತಿರುವ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನೇರವಾಗಿ ದೂರುಗಳನ್ನು ಪಡೆದು ಪೀಠ ವಿಚಾರಣೆ ನಡೆಸುತ್ತಿದೆ ಎಂದರು. ಜತೆಗೆ ಸ್ಥಳದಲ್ಲೇ ಪರಿಹಾರ ಮಾರ್ಗಸೂಚಿ ಹಾಗೂ ಸಲಹೆಗಳನ್ನು ಆಯೋಗದ ಪೀಠ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತಿದೆ. 2005ರ ಎನ್‌ಸಿಪಿಸಿಆರ್‌ ಕಾಯ್ದೆಯಡಿ ರಚನೆಯಾಗಿರುವ ಆಯೋಗಕ್ಕೆ ನ್ಯಾಯಾಂಗದ ಅಧಿಕಾರ ಹೊಂದಿದೆ. ಕಲಬುರಗಿಯಲ್ಲಿ ನಡೆಯುತ್ತಿರುವುದು ಆಯೋಗದ ದ್ವಿಸದಸ್ಯ ಪೀಠದ ಐದನೇಯ ವಿಚಾರಣೆಯಾಗಿದೆ ಎಂದು ತಿಳಿಸಿದರು.

Advertisement

ಕಲಬುರಗಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ ವಿಚಾರಣೆ ನಡೆಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ಇದೊಂದು ಹೈ.ಕ ಭಾಗಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದರು.

ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಸಿಇಒಗಳಾದ ಡಾ| ಪಿ. ರಾಜಾ, ಕವಿತಾ ಎಸ್‌. ಮನ್ನಿಕೇರಿ, ಮಹಾಂತೇಶ ಬೀಳಗಿ, ಕಲಬುರಗಿ ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಯಾದಗಿರಿ ಎಸ್‌ಪಿ ಋಷಿಕೇಶ ಭಗವಾನ್‌ ಸೋನಾವನೆ, ಅಪರ ಜಿಲ್ಲಾಧಿಕಾರಿಗಳಾದ ಬಿ. ಶರಣಪ್ಪ, ಡಾ| ರುದ್ರೇಶ, ಎಂ.ಸತೀಶ್‌ ಕುಮಾರ, ಸೈಯೀದಾ ಆಯಿಷಾ, ಹೆಚ್ಚುವರಿ ಎಸ್ಪಿಗಳಾದ ಎಸ್‌.ಬಿ. ಪಾಟೀಲ, ಸಂಗೀತಾ ಹಾಗೂ ಆರು ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಮಕ್ಕಳು, ಪಾಲಕರು ಮತ್ತು ಸ್ವಯಂ ಸೇವಾ ಸಂಘದ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next