ಕಲಬುರಗಿ: ಮಾಜಿ ಶಾಸಕ ಡಾ| ಉಮೇಶ ಜಾಧವ್‌ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಜನ್ಮ ನೀಡಿದ ತಾಯಿಗೆ ಮೋಸ ಮಾಡಿರುವ ಜಾಧವ್‌ಗೆ ಯಾವುದೇ ಸಿದ್ಧಾಂತವಿಲ್ಲ. ಅಂಥವರ ಮಗ ಅವಿನಾಶ ಜಾಧವ್‌ಗೆ ಜನತೆ ಮತ ಕೊಡಬಾರದು ಎಂದು ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ ಹೇಳಿದರು.
ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೊಡ ಪರ ಮತಯಾಚಿಸಿ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಉಮೇಶ ಜಾಧವ್‌ಗೆ ಎರಡು ಬಾರಿ ಬಿ-ಫಾರಂ ಕೊಟ್ಟಿದ್ದೇನೆ. ಮೊದಲ ಬಾರಿಗೆ ಗೆದ್ದಾಗ ಚೆನ್ನಾಗಿ ಇದ್ದ. ಎರಡನೇ ಬಾರಿ ಗೆದ್ದಾಗಲೂ ಎರಡು ತಿಂಗಳು ಚೆನ್ನಾಗಿಯೇ ಇದ್ದ. ಆಗ ನನ್ನ ಮುಂದೆ ಬಂದಾಗೆಲ್ಲ ಕಾಲಿಗೆ ಬೀಳುತ್ತಿದ್ದ. ಅಣ್ಣ ಕ್ಷೇತ್ರದಲ್ಲಿ ಆ ಕೆಲಸ, ಈ ಕೆಲಸ ಆಗಬೇಕೆಂದು ಹೇಳಿ ಮಾಡಿಸಿಕೊಳ್ಳುತ್ತಿದ್ದ. ಆದರೆ, ಈಗ ನಮ್ಮ ಬೆನ್ನಿಗೆ ಜಾಧವ್ ಚೂರಿ ಹಾಕಿದ್ದಾನೆ ಎಂದು ತೀಕ್ಷಣ್ಣವಾಗಿ ಕುಟುಕಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ದಿ| ಧರ್ಮಸಿಂಗ್ ಅವರು ಉಮೇಶ ಜಾಧವ್ ಲಂಬಾಣಿ ಸಮುದಾಯದ ವಿದ್ಯಾವಂತ ಹುಡುಗ. ಇವನು ಸಮಾಜಕ್ಕೆ ಉಪಯೋಗವಾಗುತ್ತಾನೆ. ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಎರಡು ಬಾರಿ ಗೆಲುವು ಸಾಧಿಸಿದ ಜಾಧವ್ ಸರಿಯಾಗಿಯೇ ಇದ್ದ. ಇದ್ದಕ್ಕಿದಂತೆ ಜಾಧವ್ ಬಿಜೆಪಿಯ ಕಾಯಿಲೆ ಬಡಿಸಿಕೊಂಡ. ಪಕ್ಷದಲ್ಲಿ ಜಾಗ ಕೊಟ್ಟು ಕೊಡಿಸಿ ಗೆಲ್ಲಿಸಿದವರ ವಿರುದ್ಧವೇ ಸ್ಪರ್ಧಿಸಿದ್ದೀಯಲ್ಲ? ಇದ್ಯಾವ ನ್ಯಾಯ ಜಾಧವ್? ಕಾಂಗ್ರೆಸ್ ನಿಮ್ಮ ತಾಯಿ ಅಲ್ವಾನ್ರಿ ಜಾಧವ್ ಎಂದು ಖಾರವಾಗಿ ಪ್ರಶ್ನಿಸಿದರು.
ಉಮೇಶ ಜಾಧವ್ ಚಿಂಚೋಳಿ ಜನತೆ ನೀಡಿದ ಮತಗಳನ್ನು ಮಾರಿಕೊಂಡಿದ್ದಾರೆ. ಹಣಕ್ಕಾಗಿ ಮಾರಾಟವಾಗಿದ್ದು ನಾಚಿಕೆಗೇಡು. ಬಿಜೆಪಿಯಲ್ಲಿದ್ದ ಸುಭಾಷ ರಾಠೊಡ್ ಕಾಂಗ್ರೆಸ್‌ಗೆ ಬಂದಿದ್ದಾರೆ. ಮನಗೆ ಜಾಧವ್ ಮೋಸ ಮಾಡಿದ್ದಾನೆ. ನೀನು ಅವನ ಹಾಗೆ ಮಾಡಬೇಡ ಎಂದು ಹೇಳಿ ಟಿಕೆಟ್ ಕೊಡಲಾಗಿದೆ. ಜಾಧವ್ ರೀತಿ ಮಾಡುವುದಿಲ್ಲ ಎಂದು ಸುಭಾಷ ರಾಠೊಡ್ ಪ್ರಮಾಣ ಮಾಡಿದ್ದಾನೆ. ಇಂತಹ ಪ್ರಮಾಣಿಕತೆಗಾಗಿ ಸುಭಾಷ ರಾಠೊಡ್‌ಗೆ ಚಿಂಚೋಳಿ ಜನತೆ ಮತ ಕೊಡಬೇಕೆಂದು ಪರಮೇಶ್ವರ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗಂಡೂರಾವ್ ಮಾತನಾಡಿ, ಕುಂದಗೋಳದಲ್ಲಿ ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ನಿಧನದಿಂದಾಗಿ ಉಪಚುನಾವಣೆ ಬಂದಿದೆ. ಅಲ್ಲಿ ಚುನಾವಣೆ ಅನಿರ್ವಾಯವಾಗಿತ್ತು. ಚಿಂಚೋಳಿಯಲ್ಲಿ ಉಪಚುನಾವಣೆ ಅನವಶ್ಯವಾಗಿತ್ತು. ಉಮೇಶ ಜಾಧವ್ ತಮ್ಮ ಸ್ಥಾರ್ಥಕ್ಕಾಗಿ ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದರಿಂದ ಚುನಾವಣೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ್‌ನನ್ನು ಸೋಲಿಸುವ ಮೂಲಕ ಅಪ್ಪ ಉಮೇಶ ಜಾಧವ್‌ಗೆ ಬುದ್ಧಿ ಕಲಿಸಬೇಕೆಂದರು.
ಚಿಂಚೋಳಿಯಲ್ಲಿ ಅಭಿವೃದ್ದಿ ಕೆಲಸಗಳು ಆಗಿದ್ದ ಜಾಧವ್‌ನಿಂದ ಅಲ್ಲ. ಕಾಂಗ್ರೆಸ್ ಸರ್ಕಾರದಿಂದಾಗಿ ಅಭಿವೃದ್ಧಿ ಕೆಲಸಗಳು ಆಗಿವೆ. ನಾನು ಕೆಲಸ ಮಾಡಿದ್ದೇನೆ ಹೇಳಿಕೊಂಡು ನಿಮ್ಮ ಬರುವ ಜಾಧವ್‌ಗೆ ಅರ್ಹತೆವೂ ಇಲ್ಲ. ನೈತಿಕೆಯೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೊಡ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೈಲ್ಜಾನಾಥ ಸಾಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ, ರಹೀಂ ಖಾನ್, ಶಾಸಕರಾದ ಡಾ| ಅಜಯ್ ಸಿಂಗ್, ಎಂ.ಡಿ.ಲಕ್ಷ್ಮೀನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಕೈಲಾಶನಾಥ ಪಾಟೀಲ, ವೀರಭದ್ರಸ್ವಾಮಿ, ಬಸವರಾಜ ತುಪ್ಪದ, ರೇವಣಸಿದ್ದ ಮಡಿಕೇರಿ, ಜಿಪಂ ಸದಸ್ಯೆ ಶಶಿಕಲಾ ತಿಮ್ಮನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.