Advertisement

ಪ್ರತ್ಯೇಕ ಗುಂಪಿಗೆ ಸೇರಿದೆ ದ್ರಾವಿಡ ಭಾಷೆ

12:49 PM Jun 23, 2019 | Naveen |

ಕಲಬುರಗಿ: ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮುಂತಾದ ಪ್ರಮುಖ ಭಾಷೆಗಳು ತಮ್ಮದೆಯಾದ ಪ್ರತ್ಯೇಕ ಗುಂಪುಗಳಿಗೆ ಸೇರಿದ್ದಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಹೆಚ್.ಎಂ. ಮಹೇಶ್ವರಯ್ಯ ಹೇಳಿದರು.

Advertisement

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ತಿರುವನಂತಪುರಂ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ’47ನೇ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರಜ್ಞರ ಸಮ್ಮೇಳನ ಹಾಗೂ ಅಳಿವಿನಂಚಿನ ಭಾಷೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ’ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಬರ್ಟ ಕಾಲ್ಡ್ವೆಲ್ ಇವುಗಳನ್ನು ದ್ರಾವಿಡ ಭಾಷೆಗಳೆಂದು ಹೆಸರಿಸಿದ್ದಾರೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದ್ರಾವಿಡ ಭಾಷೆಗಳಿವೆ. ಭಾರತದಲ್ಲಿ ಶೇ.20ರಷ್ಟು ಜನ ದ್ರಾವಿಡ ಭಾಷೆಗಳನ್ನು ಉಪಯೋಗಿಸುತ್ತಿದ್ದಾರೆ ಎಂದರು.

ದ್ರಾವಿಡ ಭಾಷೆಗಳ ಅಧ್ಯಯನಕ್ಕಾಗಿ 1971ರಲ್ಲಿ ದ್ರಾವಿಡ ಭಾಷಾಶಾಸ್ತ್ರಜ್ಞರ ಸಂಸ್ಥೆ ಸ್ಥಾಪಿಸಲಾಯಿತು. ಈ ಸಂಸ್ಥೆ ಪ್ರತಿ ವರ್ಷ ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರಜ್ಞರ ಸಮ್ಮೇಳನ ಆಯೋಜಿಸುತ್ತಿದ್ದು, ದ್ರಾವಿಡ ಭಾಷೆಗಳ ಅಧ್ಯಯನದಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತಿದೆ. ತದನಂತರ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಾಶಾಸ್ತ್ರಗಳ ಅಧ್ಯಯನ ಸಂಸ್ಥೆಗಳ ಸ್ಥಾಪನೆಗೆ ಸಹಕಾರಿಯಾಯಿತು ಎಂದು ಹೇಳಿದರು.

1942ನೇ ಇಸವಿಯಲ್ಲಿ ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ವಿಶಿಷ್ಟ ಕೊಡುಗೆ ನೀಡಿದ ಪ್ರಮುಖರೆಂದರೆ ಎ.ನರಸಿಂಹಯ್ಯ, ಆರ್‌.ನರಸಿಂಹಚಾರ್ಯ, ಪ್ರೊ| ಟಿ.ಎನ್‌. ಶ್ರೀಕಂಠಯ್ಯ, ಕೆ.ವಿ. ಸುಬ್ಬಯ್ಯ, ಸಿ.ಪಿ. ವೆಂಕಟರಾಮ ಅಯ್ಯರ್‌, ಕೆ. ರಾಮಕೃಷ್ಣಯ್ಯ ಇನ್ನು ಮುಂತಾದವರು ಎಂದು ತಿಳಿಸಿದರು.

Advertisement

ಜಗತ್ತಿನಾದ್ಯಂತ ಜಾಗತೀಕರಣದಿಂದಾಗಿ ಅನೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಭಾರತದಲ್ಲಿ ಸುಮಾರು 1600 ಭಾಷೆಗಳು ಅಳಿವಿನಂಚಿನಲ್ಲಿರುವುದು ಖೇದಕರದ ಸಂಗತಿ. ಇವುಗಳ ಅಧ್ಯಯನ ಮತ್ತು ಉಳಿವಿಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ ಎಂದರು. ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ| ಎ. ಮುರಿಗೆಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು.

ತಿರುವನಂತಪುರದ ಅಂತಾರಾಷ್ಟ್ರೀಯ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ನಿರ್ದೇಶಕ ಪ್ರೊ| ನಡುವಟ್ಟಂ ಗೋಪಾಲಕೃಷ್ಣನ್‌ ಮಾತನಾಡಿ, ಅಖೀಲ ಭಾರತ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆ ಕುರಿತು ವಿವರಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ| ಜಿ.ಆರ್‌. ನಾಯಕ ಸ್ವಾಗತಿಸಿದರು. ಕುಲಸಚಿವ ಪ್ರೊ| ಮುಸ್ತಾಕ್‌ ಅಹ್ಮದ ಐ. ಪಟೇಲ್ ವಂದಿಸಿದರು. ಡಾ| ಸಫಿಯಾ ಪರ್ವಿನ್‌ ನಿರೂಪಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ನಿಕಾಯದ ಡೀನ್‌ಗಳು, ಮುಖ್ಯಸ್ಥರು, ಪ್ರಾಧ್ಯಾಪಕ ವೃಂದ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗವು ಈ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾದರು. ಭಾರತ ಸೇರಿದಂತೆ ಸಿಂಗಾಪೂರ, ಶ್ರೀಲಂಕಾ, ರಷ್ಯಾ, ಯೆಮೆನ್‌ ದೇಶದ 80ಕ್ಕೂ ಹೆಚ್ಚು ಭಾಷಾಶಾಸ್ತ್ರತಜ್ಞರು ಭಾಗವಹಿಸಿ ತಮ್ಮ ಪ್ರಬಂಧ ಮಂಡಿಸಿದರು. ಇದೇ ಸಂದರ್ಭದಲ್ಲಿ ಅನೇಕ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next