Advertisement

ಒಂಭತ್ತು ಅಂತಾರಾಜ್ಯ ಮನೆಗಳ್ಳಿಯರ ಸೆರೆ

11:42 AM Sep 29, 2019 | Team Udayavani |

ಕಲಬುರಗಿ: ನಗರದಲ್ಲಿ ಪುಗ್ಗಾ, ಪಿನ್ನು ಮಾರಾಟ ನೆಪದಲ್ಲಿ ಓಡಾಡುತ್ತಾ ಬೀಗ ಹಾಕಿದ ಮನೆಗಳನ್ನು ನೋಡಿ ಹೊಂಚುಹಾಕಿ ಮನೆಗೆ ಕನ್ನಾ ಹಾಕುತ್ತಿದ್ದ ಒಂಭತ್ತು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿದ ಗ್ರಾಮೀಣ ಠಾಣೆ ಪೊಲೀಸರು ಅವರಿಂದ 77,410
ರೂ. ಜಪ್ತಿ ಮಾಡಿ, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಹಾಡ್‌ ತಾಲೂಕಿನ ಕುರುಡವಾಡಿಯ ಪಾರ್ದಿ ಜನಾಂಗದ ರೇಶ್ಮಾ ಮುಖೇಶ ಕಾಳೆ, ಸಂಗೀತಾ ಯುವರಾಜ ಕಾಳೆ, ರಾಜೇಶ್ವರಿ ರಾಜು ಕಾಳೆ, ಜಾನವಿ ರಾಮಣ್ಣ ಸಿಂಧೆ, ಭಾಗ್ಯಶ್ರೀ ಅಲಿಯಾಸ್‌ ಭಾಗಿ ಅಮರ ಪವಾರ, ಶಾನಿ ಮಹಾದೇಶ ಪವಾರ, ವೈಶಾಲಿ ಅಲಿಯಾಸ್‌ ಅಂಜಲಿ ಸಾಗರ ಪವಾರ, ಕರೂನ ರೋಹಿತ ಪವಾರ, ರಾಧಿಕಾ ಕನೇರಿಯಾ ಸಿಂಧೆ ಎನ್ನುವರನ್ನು ಬಂಧಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಬಂಧಿತ ಮಹಿಳೆಯರೆಲ್ಲ ಆಳಂದ ಮೂಲಕ ಕಲಬುರಗಿ ನಗರದ ಕಡೆಗೆ ಜೀಪ್‌ನಲ್ಲಿ ಬರುತ್ತಿರುವ ಖಚಿತ ಮಾಹಿತಿ ಆಧರಿಸಿ ನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಡಿಸಿಪಿ ಕಿಶೋರಬಾಬು ಮಾರ್ಗದರ್ಶನದಲ್ಲಿ ಸಿ ಉಪವಿಭಾಗದ ಎಸಿಪಿ ಎಸ್‌.
ಎಚ್‌. ಸುಬೇದಾರ ನೇತೃತ್ವದಲ್ಲಿ ಗ್ರಾಮೀಣ ಪಿಐ ಸೋಮಲಿಂಗ, ಪಿಎಸ್‌ಐ ಎಸ್‌.ಎಸ್‌. ದೊಡ್ಮನಿ ಹಾಗೂ ಸಿಬ್ಬಂದಿಗಳಾದ ಹುಸೇನಬಾಷಾ, ಕೇಶುರಾಯ, ರಾಜಕುಮಾರ, ಅಂಬಾಜಿ, ಕುಶಣ್ಣಾ, ಶರಣಗೌಡ, ಅನೀಲ, ಪ್ರಕಾಶ, ಶಾಂತಕುಮಾರ ಹಾಗೂ ಮಹಿಳಾ ಸಿಬ್ಬಂದಿ ರೇಣುಕಾ, ರೇಷ್ಮಾ ಸೇರಿ ಹತಗುಂದಾ ಕ್ರಾಸ್‌ ಹತ್ತಿರ ಜೀಪ್‌ನ್ನು ತಡೆದು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಬಂಧಿತ ಆರೋಪಿಗಳು ಸೆ.8 ರಂದು ನಗರದ ಮಿಜಬಾ ನಗರ ಬಡಾವಣೆಯ ಅಲ್ತಾಫ್‌ ಲೇಔಟ್‌ನಲ್ಲಿ ಕೀಲಿ ಹಾಕಿದ ಮನೆಗೆ ಕನ್ನಾ ಹಾಕಿ ನಗ-ನಾಣ್ಯ ಕಳವು ಮಾಡಿದ್ದರು. ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿದ್ದ ಹಣ 77,410 ರೂ. ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next