Advertisement

ಗ್ರಾಮವಾಸ್ತವ್ಯ ಮುಂದೂಡಿಕೆಗೆ ಮೂಡಿವೆ ರೆಕ್ಕೆಪುಕ್ಕ

09:43 AM Jun 23, 2019 | Team Udayavani |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇರೂರ ಬಿ. ಗ್ರಾಮದ ವಾಸ್ತವ್ಯ ಹಾಗೂ ಜನತಾ ದರ್ಶನ ಮುಂದೂಡಿಕೆ ಇಲ್ಲವೇ ರದ್ದಾಗಲು ಮಳೆಯ ಜತೆಗೆ ಬೇರೆ ಕಾರಣಗಳುಂಟೇ ?

Advertisement

– ಈ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾದಗಿರಿ ಜಿಲ್ಲೆ ಚಂಡರಕಿಯಲ್ಲಿ ಗ್ರಾಮವಾಸ್ತವ್ಯ ವೇಳೆ ಸಿಎಂ ಎದುರೇ ವೇದಿಕೆಯಲ್ಲಿ ಸರ್ಕಾರದ ಪಾಲುದಾರರಾದ ದೋಸ್ತಿಗಳ ಮಧ್ಯೆ ಕಿತ್ತಾಟ, ಮತ್ತೂಂದೆಡೆ ಸರ್ಕಾರದ ಭವಿಷ್ಯದ ಬಗ್ಗೆ ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಸಿದ್ಧರಾಮಯ್ಯ ನೀಡಿದ ತದ್ವಿರುದ್ಧ ಹೇಳಿಕೆ ಬಿಸಿತುಪ್ಪವಾಗಿದ್ದಾಗ ಕಾಕತಾಳೀಯ ಎಂಬಂತೆ ಮಳೆ ಸುರಿದಿದ್ದು ಬಿಸೋ ದೊಣ್ಣೆಯಿಂದ ಸಿಎಂರನ್ನು ಪಾರು ಮಾಡಿತು ಎಂದೂ ಹೇಳಲಾಗುತ್ತಿದೆ.

ಎಲ್ಲಕ್ಕೂ ಮಿಗಿಲಾಗಿ ಚಂಡರಕಿಯ ಕಾರ್ಯಕ್ರಮದ ವೇಳೆ ಎಲ್ಲಿ ನೋಡಿದರಲ್ಲಿ ಜೆಡಿಎಸ್‌ ಧ್ವಜಗಳೇ ರಾರಾಜಿಸುತ್ತಿದ್ದಿದ್ದು ಹಾಗೂ ಕಟೌಟ್‌ಗಳಲ್ಲಿ ಕಾಂಗ್ರೆಸ್‌ ನಾಯಕರ ಫೋಟೋಗಳು ಪ್ರಮುಖವಾಗಿ ಕಾಣದೇ ಹೋಗಿದ್ದು ಮೈತ್ರಿ ನಾಯಕರ ಕಿತ್ತಾಟಕ್ಕೆ ಕಾರಣವಾಗಿತ್ತು. ಹೇರೂರ ಬಿ. ಗ್ರಾಮದ ವಾಸ್ತವ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಸನ್ನಿವೇಶಗಳು ಎದುರಾದರೆ ಇಲ್ಲದ ಉಸಾಬರಿ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಧೋರಣೆಯೂ ಮುಂದೂಡಿಕೆಗೆ ಮಗದೊಂದು ಕಾರಣ ಎನ್ನಲಾಗುತ್ತಿದೆ.

ಇನ್ನು ಮುಖ್ಯಮಂತ್ರಿಗಳು ಇಂದಲ್ಲ ನಾಳೆ ಹೇರೂರ ಗ್ರಾಮಕ್ಕೆ ಬರಬಹುದು. ಆದರೆ ಅವರು ಈ ಭಾಗಕ್ಕೆ ಬಂದಾಗಲೇ ಮಳೆಯಾಗಿದೆ. ಈ ಹಿಂದೆಯೂ ಅವರು ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸಿದ್ದಾಗ ಮಳೆ ಸುರಿದಿತ್ತು. ಇದು ಸಂತಸದ ಸಂಗತಿ ಎಂಬ ಮಾತು ಕೇಳಿಬಂದಿದೆ.

Advertisement

ಹೇರೂರ ಬಿ. ಯಲ್ಲಿ ಮಳೆ ಜೋರಾಗಿ ಬಂದಿದೆ. ಜನತಾ ದರ್ಶನಕ್ಕೆ ಗ್ರಾಮದೇವತೆ ಹುಲಿಕಂಠೇಶ್ವರ ದೇವಸ್ಥಾನ ಎದುರಿನ ಹೊಲದಲ್ಲಿ ಟೆಂಟ್ ಹಾಕಲಾಗಿತ್ತು. ಅದರ ಅಕ್ಕಪಕ್ಕವೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಮಳೆಯಿಂದ ಹೊಲವೆಲ್ಲ ಹಸಿಯಾಗಿದ್ದಲ್ಲದೇ ನೀರು ನಿಂತಿದ್ದರಿಂದ ವಾಹನಗಳ ನಿಲುಗಡೆ ಅಸಾಧ್ಯ. ಬಹುಮುಖ್ಯವಾಗಿ 15 ಸಾವಿರ ಜನರಿಗೆ ಸೌಕರ್ಯ ಕಲ್ಪಿಸುವುದು ಕಷ್ಟ . ಅಲ್ಲದೇ ಫ‌ರತಾಬಾದ್‌ನಿಂದ ಹೇರೂರ ಬಿ.ಗೆ ಹೋಗುವ ಮಾರ್ಗ ನಡುವೆ ಐದಾರು ಕಿ.ಮೀ. ರಸ್ತೆಯನ್ನು ಡಾಂಬರೀಕರಣಗೊಳಿಸದೆ ಮುರುಂ ಬಳಸಿ ಮಾಡಿದ್ದರಿಂದ ವಾಹನಗಳು ಸರಾಗವಾಗಿ ಹೋಗಲು ಅಸಾಧ್ಯವಾಗಿದೆ, ಎಲ್ಲಾದರೂ ಎಡವಟ್ಟಾದರೆ ಸುಮ್ಮನೆ ಯಾಕೆ ತೊಂದರೆ ಎಂದು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಗ್ರಾಮ ವಾಸ್ತವ್ಯ ಮಂದೂಡಿಕೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೇರೂರ ಬಿ. ಗ್ರಾಮದಲ್ಲಿ ಸಿಎಂ ವಾಸ್ತವ್ಯ ಹಾಗೂ ಜನತಾದರ್ಶನ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಸುಧಾರಣಾ ಕ್ರಮಗಳಾಗಿವೆ. ಗ್ರಾಮಸ್ಥರ ಹಲವು ಬೇಡಿಕೆಗಳಿಗೆ ಸಿಎಂ ಸಮ್ಮತಿ ಸೂಚಿಸಿ, ಆ ಪೈಕಿ ಕೆಲವು ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ವಾಸ್ತವ್ಯಕ್ಕಾಗಿ ಮಗದೊಂದು ಗ್ರಾಮ ಆಯ್ಕೆ ಮಾಡಿಕೊಂಡರೆ ಅದೂ ಕೂಡ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರವೂ ಕೇಳಿಬಂದಿದೆ.

ಹೇರೂರ ಬಿ. ಗ್ರಾಮದ ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಮುಂದೂಡಿಕೆಯಾಗಿದಕ್ಕೆ ಜನತೆಯ ಕ್ಷಮೆ ಕೋರುವೆ. ಮುಂದಿನ ದಿನಗಳಲ್ಲಿ ಸಿಎಂ ಹೇರೂರ ಬಿ. ಗ್ರಾಮದಲ್ಲೇ ವಾಸ್ತವ್ಯ ಮಾಡ್ತಾರೋ ಇಲ್ಲವೇ ಇನ್ನೊಂದು ಗ್ರಾಮ ಆಯ್ಕೆ ಮಾಡುತ್ತಾರೋ ಅದು ಅವರ ವಿವೇಚನೆಗೆ ಬಿಟ್ಟಿದ್ದು. ವಾಸ್ತವ್ಯದ ಮುಂದಿನ ದಿನಾಂಕ ಜುಲೈನಲ್ಲಿ ತಿಳಿಸುವುದಾಗಿ ಸಿಎಂ ಹೇಳಿದ್ದಾರೆ.
ಪ್ರಿಯಾಂಕ್‌ ಖರ್ಗೆ,
ಉಸ್ತುವಾರಿ ಸಚಿವ, ಕಲಬುರಗಿ

ಅಧಿಕಾರಿಗಳಿಗೆ ಸೂಚನೆ
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನದಲ್ಲಿ 2100 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಹಕ್ಕು ಪತ್ರ ವಿತರಿಸಲು ಉದ್ದೇಶಿಸಲಾಗಿತ್ತು. ಆದರೆ ಕಾರ್ಯಕ್ರಮ ಮುಂದೂಡಿಕೆಯಾಗಿದ್ದರಿಂದ ಹಕ್ಕುಪತ್ರಗಳನ್ನು ಸಂಬಂಧಪಟ್ಟ ಆಯಾ ತಾಲೂಕಿನಲ್ಲಿಯೇ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next