ಕಲಬುರಗಿ: ಇತಿಹಾಸ ವರ್ತಮಾನಕ್ಕೆ ತರುವ ಶಕ್ತಿ ಕಲೆಗಿದೆ. ಚಿತ್ರಕಲೆ, ಶಿಲ್ಪಕಲೆ, ವಾಸ್ತುಕಲೆ ಪ್ರಕಾರಗಳು ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಕಾಲ ಕಟ್ಟಿ ಹಾಕುವ ಶಕ್ತಿ ಹೊಂದಿರುವ ಚಿತ್ರಕಲೆಗಿದೆ ಎಂದು ಹಿರಿಯ ಕಲಾವಿದ ಡಾ| ವಿ.ಜಿ.ಅಂದಾನಿ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶರಣಬಸವ ವಿಶ್ವವಿದ್ಯಾಲಯ ಲಲಿತಕಲಾ ವಿಭಾಗದ ಮುಖ್ಯಸ್ಥ, ಹಿರಿಯ ಕಲಾವಿದ ಡಾ| ಸುಬ್ಬಯ್ಯ ಎಂ.ನೀಲಾ ಅವರ ಕುರಿತ ‘ನೀಲಾಮೃತ’ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 64 ವಿಧದ ಕಲೆಗಳಲ್ಲಿ ಕುಲಕಸಬುಗಳಾದ ಕಮ್ಮಾರಿಕೆ, ಬಡಿಗೆತನ, ಕುಂಬಾರಿಕೆ ಕೂಡ ಕಲೆಗಾರಿಕೆ ಭಾಗವಾಗಿವೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಡಾ| ವಿ.ಡಿ. ಮೈತ್ರಿ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಲಲಿತ ಕಲೆಗಳು ವ್ಯಾಪಕವಾಗಿ ಬೆಳೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.
‘ನೀಲಾಮೃತ’ ಗ್ರಂಥ ಪರಿಚಯಿಸಿದ ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಚಿತ್ರಕಲೆಯು ಮೌನದ ಭಾಷೆ. ಇದನ್ನು ಸಶಕ್ತವಾಗಿ ಬಳಸಲು ಕಲಿತರೆ ಮಾತ್ರ ಉತ್ತಮ ಕಲಾವಿದರಾಗಲು ಸಾಧ್ಯ. ಇದನ್ನು ಡಾ| ಎಸ್.ಎಂ.ನೀಲಾ ಸಾಧಿಸಿದ್ದಾರೆ. ಕಷ್ಟ ಪಟ್ಟು ಬೆಳೆದ ನೀಲಾ ತಮ್ಮ ಅನುಭವವನ್ನೇ ಕಲೆಯನ್ನಾಗಿಸಿಕೊಂಡಿದ್ದಾರೆ ಎಂದರು.
ಡಾ| ಎಸ್.ಎಂ. ನೀಲಾ ರಚಿಸಿದ ಚಿತ್ರಕಲಾ ಪ್ರದರ್ಶನವನ್ನು ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ| ಲಕ್ಷ್ಮೀ ಪಾಟೀಲ ಉದ್ಘಾಟಿಸಿದರು. ಇದೆ ವೇಳೆ ನಾಡೋಜ ಜೆ.ಎಸ್. ಖಂಡೇರಾವ, ಡಾ| ಎಸ್.ಎಂ. ಹಿರೇಮಠ, ಬಸವರಾಜ ಉಪ್ಪಿನ್, ಗೋರಟಿ ಅನ್ನದಾನಯ್ಯ, ಡಾ| ಕೊತ್ಲಿ ಬಸವರಾಜ, ಶಿವಕುಮಾರ ಶಿರಿ, ಡಾ| ರೆಹಮಾನ್ ಪಟೇಲ, ಡಾ| ಶಾಹೀದ್ ಪಾಶಾ, ಡಾ| ವಿಶ್ವೇಶ್ವರಿ ತಿವಾರಿ, ಟಿ. ದೇವೇಂದ್ರ, ಮಹೇಶ ಬಡಿಗೇರ, ಯುವರಾಜ ಅನಂತ ಚಿಂಚನಸೂರ ಅವರನ್ನು ಸನ್ಮಾನಿಸಲಾಯಿತು.
ಮಹ್ಮದ್ ಅಯಾಜುದ್ದೀನ್ ಪಟೇಲ, ನೀಲಾಮೃತ ಕೃತಿ ಲೇಖಕ ಡಾ| ಬಸವರಾಜ ಕಲೆಗಾರ, ನಿವೃತ್ತ ಪ್ರಾಧ್ಯಾಪಕ ಡಾ| ಎಸ್.ಎಂ. ಹಿರೇಮಠ, ಡಾ| ಪರಿಮಳಾ ಅಂಬೇಕರ್, ಡಾ| ಅಶೋಕ ಶೆಟಕಾರ, ಡಾ|ಪರಶುರಾಮ, ರಾಘವೇಂದ್ರ ಭುರ್ಲಿ, ಸಿ.ಎಸ್. ಮಾಲಿಪಾಟೀಲ, ನಾರಾಯಣ ಜೋಶಿ, ಡಾ| ವಿಶ್ವೇಶ್ವರಿ ತಿವಾರಿ ಪಾಲ್ಗೊಂಡಿದ್ದರು.