ಕಲಬುರಗಿ: ಕರ್ನಾಟಕ ಅರ್ಥೋಪೆಡಿಕ್ಸ್ ಅಸೋಷಿಯೆಷನ್ ಅಧ್ಯಕ್ಷರು ಹಾಗೂ ಖ್ಯಾತ ಅರ್ಥೋಪೆಡಿಕ್ ತಜ್ಞರಾದ ಡಾ| ಎಸ್.ಬಿ.ಕಾಮರಡ್ಡಿ ಅವರ ತಂದೆಯವರಾದ ಬಸವರಾಜಪ್ಪ ಕಾಮರಡ್ಡಿ ಅವರ ನನ್ನ ನಿಲುವು ಭಾಗ-1 ಮತ್ತು ಭಾಗ-2ರ ಪುಸ್ತಕಗಳ ಬಿಡುಗಡೆ ಹಾಗೂ ನನ್ನ ನಿಲುವು ವಚನಗಳ ಧ್ವನಿಮುದ್ರಿಕೆ ಲೋಕಾರ್ಪಣೆ ಸಮಾರಂಭ ಸೆ.22ರಂದು ಬೆಳಗ್ಗೆ 10:45ಕ್ಕೆ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
92 ವಯಸ್ಸಿನ ಬಸವರಾಜಪ್ಪ ಅವರು ಕೃತಿ ರಚಿಸಿದ್ದು, ಆಧುನಿಕ ವಚನಗಳನ್ನು ಒಳಗೊಂಡ ಕೃತಿ ಇದಾಗಿದ್ದು, ವಚನಗಳನ್ನು ಸುಸ್ರಾವ್ಯವಾಗಿ ಧ್ವನಿಮುದ್ರಿಕೆ ಅಳವಡಿಸಲಾಗಿದೆ. ಧ್ವನಿ ಮುದ್ರಿಕೆ ಸಹ ಲೋಕಾರ್ಪಣೆಗೊಳ್ಳುತ್ತಿದೆ. ಅಂದು (ಸೆ.22) ಬಸವರಾಜಪ್ಪ ಅವರ 92ನೇ ಹಾಗೂ ಅವರ ಧರ್ಮಪತ್ನಿ ಗೌರಮ್ಮ ಬಸವರಾಜಪ್ಪ ಅವರ 73ನೇ ಜನ್ಮ ದಿನಾಚರಣೆಯಿದೆ.
ಮುಗುಳನಾಗಾಂವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಹೆಡಗಿಮದ್ರಿ ಗ್ರಾಮದ ಶಾಂತಶಿವಯೋಗಿ ಮಠದ ಶಾಂತಮಲ್ಲಿಕಾರ್ಜು ಸ್ವಾಮಿಗಳ ಸನ್ನಿಧಾನದಲ್ಲಿ ಸಂಸದ ಡಾ| ಉಮೇಶ ಜಾಧವ ಕೃತಿ ಬಿಡುಗಡೆಗೊಳಿಸುವರು ಎಂದು ವೈದ್ಯರಾದ ಡಾ| ಎಸ್.ಬಿ.ಕಾಮರಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಸವರಾಜಪ್ಪ ಕಾಮರಡ್ಡಿ ಅವರ ಎರಡನೇ ಕೃತಿಯಾಗಿದ್ದು, ಇದೇ ಸಂದರ್ಭದಲ್ಲಿ ತಂದೆ-ತಾಯಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಮಾಜಿ ಶಾಸಕ ಡಾ| ಎ.ಬಿ.ಮಲಕರಡ್ಡಿ ಅಧ್ಯಕ್ಷತೆ ವಹಿಸುವರು. ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಈಶ್ವರಯ್ಯ ಮಠ ಕೃತಿ ಪರಿಚಯ ಮಾಡುವರು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಖನೀಜ್ ಫಾತೀಮಾ, ಎಂ.ವೈ. ಪಾಟೀಲ, ವೆಂಕಟರೆಟ್ಟಿ ಮುದ್ನಾಳ, ಶರಣಬಸವಪ್ಪ ದರ್ಶನಾಪುರ, ಬಸವರಾಜ ಮತ್ತಿಮಡು, ಡಾ| ರಾಜಕುಮಾರ ಪಾಟೀಲ ತೇಲ್ಕೂರ, ಡಾ| ಅಜಯಸಿಂಗ್, ಸುಭಾಷ ಆರ್. ಗುತ್ತೇದಾರ, ಪ್ರಿಯಾಂಕ್ ಖರ್ಗೆ, ಡಾ| ಅವಿನಾಶ ಜಾಧವ, ನರಸಿಂಹ ನಾಯಕ ಸೇರಿದಂತೆ ಮಾಜಿ ಸಚಿವರು, ಮಾಜಿ ಶಾಸಕರು, ಎಚ್‌ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಎಚ್‌ಕೆಇ ಸಂಸ್ಥೆ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಬಸವರಾಜಪ್ಪ ಕಾಮರೆಡ್ಡಿ ಅವರ “ನನ್ನ ನಿಲುವು’ ವಚನಗಳಿಗೆ ಸುಶ್ರಾವ್ಯ ಧ್ವನಿ ನೀಡಿ, ಧ್ವನಿ ಮುದ್ರಿಕೆಗಳನ್ನು (ಸಿ.ಡಿ) ಹೊರತಂದಿರುವ ಬೀದರಿನ ಖ್ಯಾತ ಗಾಯಕ ಪಂ. ಶಿವಕುಮಾರ ಪಾಂಚಾಳ ಅವರ ಗಾಯನ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಗಿರಿಜಾದೇವಿ ಸಂಗೀತ ಮತ್ತು ನೃತ್ಯ ಕಲಾಮಂದಿರದ ವಿದ್ಯಾರ್ಥಿಗಳು ವಿನ್ಯಾಸ ಧರ್ಮಗಿರಿ ನಿರ್ದೇಶನದಲ್ಲಿ ನನ್ನ ನಿಲುವು ಸಂಕಲನದ ಆಯ್ದ ವಚನಗಳ ಆಧಾರಿತ ನೃತ್ಯ ರೂಪಕ ಪ್ರಸ್ತುತ ಪಡಿಸುವರು ಎಂದು ವಿವರಣೆ ನೀಡಿದರು. ಕಾರ್ಯಕ್ರಮ ಸಂಯೋಜಕಿ ಎಸ್.ಎಸ್. ಹಿರೇಮಠ ಹಾಜರಿದ್ದರು.