Advertisement

429 ಕೋಟಿ ರೂ. ಗ್ರಂಥಾಲಯ ಕರ ಬಾಕಿ

03:16 PM Jul 22, 2019 | Team Udayavani |

ಕಲಬುರಗಿ: ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳು ಗ್ರಂಥಾಲಯಗಳ 429 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿವೆ. ಇದರಿಂದ ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಆಧುನಿಕ ಸೌಲಭ್ಯ ಕಲ್ಪಿಸಲು ಹಿನ್ನಡೆಯಾಗುತ್ತಿದೆ ಎಂದು ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶ ಕುಮಾರ ಎಚ್. ಹೊಸಮನಿ ಹೇಳಿದರು.

Advertisement

ನಗರದ ಕನ್ನಡ ಭನವ ಆವರಣದ ಸುವರ್ಣ ಭವನದಲ್ಲಿ ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ| ವಿಜಯಕುಮಾರ ಪರುತೆ ಅವರ ‘ಹುಡುಕಾಟ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದಲ್ಲಿ ಅತಿ ಹೆಚ್ಚು ಗ್ರಂಥಾಲಯ ಹೊಂದಿದ ರಾಜ್ಯ ನಮ್ಮದು. ಎಲ್ಲ ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಷ ನೀಡುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ. ಆದರೆ, ನಗರಸಭೆ, ಪುರಸಭೆಗಳು ಗ್ರಂಥಾಲಯಗಳ ಕೋಟ್ಯಂತರ ರೂ. ಕರವನ್ನು ತುಂಬಿಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 350 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾರ್ಖಂಡ್‌ನ‌ಲ್ಲಿ ಕೇವಲ 30 ಗ್ರಂಥಾಲಯಗಳು, ರಾಜಸ್ಥಾನದಲ್ಲಿ 60 ಗ್ರಂಥಾಲಯಗಳು ಮಾತ್ರವೇ ಇವೆ. 25 ಕೋಟಿ ಜನ ಸಂಖ್ಯೆ ಹೊಂದಿರುವ ಉತ್ತಪ್ರದೇಶದಲ್ಲಿ ಬರೀ 68 ಗ್ರಂಥಾಲಯಗಳು ಇವೆ. 6.5 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ಏಳು ಸಾವಿರ ಗ್ರಂಥಾಲಯಗಳನ್ನು ಹೊಂದಿದೆ. ರಾಷ್ಟ್ರದಲ್ಲಿ ಮಾದರಿ ಗ್ರಂಥಾಲಯ ಪ್ರಶಸ್ತಿ ನಮ್ಮ ರಾಜ್ಯಕ್ಕೆ ಸಿಕ್ಕಿದೆ ಎಂದರು.

ಉತ್ತರ ಕರ್ನಾಟಕ- ಹೈದ್ರಾಬಾದ ಕರ್ನಾಟಕ ಪುಸ್ತಕಗಳೇ ಹೆಚ್ಚು: ಪ್ರತಿ ವರ್ಷದ ಪುಸ್ತಕಗಳ ಆಯ್ಕೆ ಸಮಿತಿಗೆ 10 ಸಾವಿರ ಪುಸ್ತಕಗಳು ಬರುತ್ತಿವೆ. ನಾಲ್ಕರಿಂದ ಐದು ಸಾವಿರ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಖರೀದಿಸುತ್ತೇವೆ. ಆಯ್ಕೆ ಸಮಿತಿಗೆ ಬರುವ ಪುಸ್ತಕಗಳಲ್ಲಿ ಹಳೆ ಮೈಸೂರು, ಕರಾವಳಿ ಭಾಗದ ಜಿಲ್ಲೆಗಳಿಗಿಂತಹ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ ಭಾಗದ ಪುಸ್ತಕಗಳೇ ಅಧಿಕ ಇರುತ್ತವೆ. ಇದೊಂದು ಸಂತೋಷಕರ ವಿಷಯ ಎಂದು ಹೇಳಿದರು.

Advertisement

ಓದುಗರೀಗ ಅಧಿಕಾರಿಗಳು: ಗ್ರಂಥಾಲಯಗಳನ್ನು ಉಪಯೋಗಿಸಿಕೊಂಡು ಸಾಹಿತಿ, ಸಾಹಿತ್ಯ ರೂಪಗೊಳುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಲು ಯುವ ಜನಾಂಗಕ್ಕೆ ಗ್ರಂಥಾಲಯಗಳು ವೇದಿಕೆಯಾಗಿವೆ. ಸಾರ್ವಜನಿಕ ಗ್ರಂಥಾಲಯಗಳಲ್ಲೇ ಓದಿದ ಅನೇಕರು ಐಎಎಸ್‌, ಐಪಿಎಸ್‌, ಕೆಎಎಸ್‌ ಉತ್ತೀರ್ಣರಾಗಿದ್ದಾರೆ ಎಂದರು.

ಬೆಂಗಳೂರಿನ ಗ್ರಂಥಾಲಯವೊಂದರಲ್ಲೇ ಓದಿದ 174 ಜನ ವಿವಿಧ ಉನ್ನತ ನೌಕರಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದು ದೇವಾಲಯಕ್ಕಿಂತ ಗ್ರಂಥಾಲಯ ಶ್ರೇಷ್ಠ ಎಂಬುವುದನ್ನು ನಿರೂಪಿಸುತ್ತದೆ. ನಿರಂತರವಾಗಿ ಓದಿ ಜ್ಞಾನ ಸಂಪಾದಿಸಿದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಲೇಖಕರು, ಚಿಂತಕರು, ವಿದ್ಯಾವಂತರಲ್ಲಿ ಹುಡುಕಾಟ ಮನೋಭಾವ ಬೆಳೆದಾಗ ಹೊಸತನ ಕೊಡಲು ಸಾಧ್ಯವಾಗುತ್ತದೆ. ಕವಿ ಡಾ| ವಿಜಯಕುಮಾರ ಪರುತೆ ಹಿಂದಿಯ ಉಪನ್ಯಾಸಕರಾದರೂ ಕನ್ನಡದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಹಾಗೂ ಕನ್ನಡ ಭಾಷಾ ಪಂಡಿತ್ಯವನ್ನು ಅವರು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಿ ಪದವಿ ಮಹಿಳಾ ಮಹಾ ವಿದ್ಯಾಲಯದ ಡಾ| ಈಶ್ವರಯ್ಯ ಮಠ ‘ಹುಡುಕಾಟ’ ಕವನ ಸಂಕಲನದ ಬಗ್ಗೆ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕೋಶಾಧ್ಯಕ್ಷ ದೌಲತರಾಯ ಪಾಟೀಲ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಸಿ.ಎಸ್‌. ಮಾಲಿಪಾಟೀಲ, ಸವಿತಾ ನಾಶಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next