Advertisement

ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಗರಿ

11:23 AM Sep 05, 2019 | Naveen |

ರಂಗಪ್ಪ ಗಧಾರ
ಕಲಬುರಗಿ:
ನಾನು ಪ್ರಶಸ್ತಿಗೆ ಅರ್ಜಿ ಹಾಕುವುದೇ ಬೇಡ ಎಂದು ಕುಳಿತಿದ್ದೆ. ಅರ್ಜಿ ಹಾಕಿದ ಮೇಲೆ ಪ್ರಶಸ್ತಿ ಸಿಗುತ್ತದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ. ಆದರೆ, ಪ್ರಶಸ್ತಿ ಪಟ್ಟಿಯಲ್ಲಿ ಮೊದಲ ಹೆಸರೇ ನನ್ನ ಜಿಲ್ಲೆಯ ಜೊತೆಗೆ ನನ್ನ ಹೆಸರು ಇದ್ದದ್ದು ಕಂಡು ಅಶ್ಚರ್ಯವಾಯಿತು.

Advertisement

ಇದು ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಪ್ರಾಥಮಿಕ ಶಾಲಾ ಶಿಕ್ಷಕಿ ಆಶಾ ಹೆಗಡೆ ಅವರ ಮಾತುಗಳು. ಪ್ರಶಸ್ತಿ ಸಿಕ್ಕಿರುವ ಬಗ್ಗೆ ಅವರು ‘ಉದಯವಾಣಿ’ಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.

ಕಲಬುರಗಿಯನ್ನು ಹಿಂದುಳಿದ ಜಿಲ್ಲೆ ಎನ್ನುತ್ತಾರೆ. ಆದರೆ, ಮನಸು ಮಾಡಿದರೆ ಏನಾದರೂ ಸಾಧಿಸಬಹುದು. ಎಂತಹದ್ದೇ ಅಡೆ-ತಡೆಗಳು ಬಂದರೂ ಸಾಧನೆ ನಿಲ್ಲಲ್ಲ. ಪ್ರಯತ್ನ ಒಂದಿದ್ದರೆ ಸಾಕು. ಉತ್ತಮ ಶಿಕ್ಷಕರ ಪಟ್ಟಿಯಲ್ಲಿ ನನ್ನ ಹೆಸರು ಇರುವುದಕ್ಕಿಂತ ಹೆಚ್ಚಾಗಿ ಕಲಬುರಗಿ ಎಂದಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪುಟ್ಟ ಗ್ರಾಮ ಕಡತೋಕಾ ನಮ್ಮೂರು. 2005ರಲ್ಲಿ ಶಿಕ್ಷಕಿಯಾಗಿ ತಾಲೂಕಿನ ಶರಣ ಸಿರಸಗಿ ತಾಂಡಾ ಶಾಲೆಗೆ ಬಂದಿದ್ದೆ. ಆದರೆ, ಶಾಲೆ ವ್ಯವಸ್ಥೆ ಕಂಡು ತುಂಬಾ ಬೇಸರ ಮತ್ತು ಗಾಬರಿಯೂ ಆಗಿತ್ತು. ಸ್ವಂತ ಕಟ್ಟಡವಿಲ್ಲದ ಸರ್ಕಾರಿ ಶಾಲೆ. ಅರ್ಥವಾಗದ ಮಕ್ಕಳು ಆಡುವ ಮಾತುಗಳು. ಹೀಗೆ ಬೇರೆ-ಬೇರೆ ಸವಾಲುಗಳು ಎದುರಾದವು ಎಂದು ತಮ್ಮ ವೃತ್ತಿ ಜೀವನದ ಆರಂಭ ದಿನಗಳನ್ನು ಸ್ಮರಿಸಿದರು ಆಶಾ ಹೆಗಡೆ.

ಶರಣ ಸಿರಸಗಿ ತಾಂಡಾ ಶಾಲೆಯಲ್ಲಿ ಸತತವಾಗಿ 12 ವರ್ಷ ಮೂರು ತಿಂಗಳು ಕಾರ್ಯ ನಿರ್ವಹಿಸಿದ್ದೇನೆ. ಆರಂಭದಲ್ಲಿ ಇದೇ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ ಕಾಶಿಬಾಯಿ ಅವರ ಮನೆಯಲ್ಲೇ ಶಾಲೆ ನಡೆಯುತ್ತಿತ್ತು. ಈ ಮೊದಲಿದ್ದ ಶಿಕ್ಷಕರು ವರ್ಗವಾಗಿ ಹೋದ ಮೇಲೆ ನಾನು ಶಾಲೆಯ ಮುಖ್ಯ ಶಿಕ್ಷಕಿ ಹೊಣೆ ಹೊತ್ತುಕೊಂಡೆ. ಆಗ ‘ನನ್ನ ಶಾಲೆ’ ಹೀಗೆ ಇರಬೇಕೆಂಬ ಕನಸಿನೊಂದಿಗೆ ಅನೇಕ ಪ್ರಯತ್ನ ಪಟ್ಟೆ. ಸಿಗುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಮಕ್ಕಳಿಗೆ ಪಾಠ ಮಾಡಿದೆ. ಬಳಿಕ ಹೇಗಾದರೂ ಶಾಲೆಗೆ ಕಟ್ಟಡ ಮಾಡಲೇಬೇಕೆಂದು ಹಳ್ಳದ ಮೇಲೆ ಸ್ವತಃ ಕಟ್ಟಡ ನಿರ್ಮಿಸಲಾಯಿತು ಎಂದು ಆಶಾ ಹೆಗಡೆ ಹೇಳಿದರು.

Advertisement

ನಮ್ಮ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳು ಸಹಕಾರ ನೀಡಿದರು. ಎಚ್ಕೆಆರ್‌ಡಿಬಿಯಿಂದ 30 ಲಕ್ಷ ರೂ. ಮೌಲ್ಯದಲ್ಲಿ ಶಾಲೆಗೆ ವಿವಿಧ ಸಾಮಗ್ರಿಗಳನ್ನು ಒದಗಿಸಿದರು. ಆಗಿನ ಜಿಲ್ಲಾಧಿಕಾರಿಗಳು, ನಮ್ಮ ಇಲಾಖೆ ಅಧಿಕಾರಿಗಳು, ಶಾಸಕರು ಶಾಲೆಗೆ ಭೇಟಿ ಕೊಟ್ಟು ಪ್ರೋತ್ಸಾಹಿಸಿದರು. ಮೇಲಾಗಿ ವಿಪ್ರೋ ಕಂಪನಿ ಮಾಲೀಕ ಅಜೀಂ ಪ್ರೇಮ್‌ಜಿ ಅವರು ಶಾಲೆಗೆ ಭೇಟಿ ನೀಡಿ ಶುಭಾ ಹಾರೈಸಿದ್ದು ನಿಜಕ್ಕೂ ಸಂತೋಷ ಮತ್ತು ಹೆಮ್ಮೆ ಎನಿಸಿತು. ಶಾಲೆ ಮಾತ್ರವಲ್ಲ ಊರಿಗೂ ನೀರು ಇರಲಿಲ್ಲ. ಈ ಸಮಯದಲ್ಲಿ ಶಾಲೆಗೆ ನೀರು ಬರುವುದರೊಂದಿಗೆ ಇಡೀ ಊರಿಗೆ ನೀರು ಸಿಗುವಂತಾಯಿತು. ಇದರಿಂದ ಶಾಲೆ ಬಗ್ಗೆ ಗ್ರಾಮಸ್ಥರ ಮಮತೆ ಹೆಚ್ಚಾಯಿತು. ಇದೆಲ್ಲವೂ ಹಿಂಜರಿಕೆ ಇಲ್ಲದೇ ಮಾಡಿದ ಪ್ರತಿಫಲ ಎನ್ನುತ್ತಾರೆ ಅವರು.

ಎರಡು ವರ್ಷಗಳ ಹಿಂದೆ ಆಶಾ ಹೆಗಡೆ ಶರಣ ಸಿರಸಗಿ ತಾಂಡಾ ಶಾಲೆಯಿಂದ ವರ್ಗಾವಣೆ ಆಗಿದೆ. ಸದ್ಯ ಕಲಬುರಗಿ ದಕ್ಷಿಣ ವಲಯದ ಮೇಳಕುಂದಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವೆ. ಜತೆಗೆ ಬುನಾದಿ ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ನಲಿಕಲಿ, ಪದ್ಯ ಕಲಿಕೆಯ ಜಿಲ್ಲಾ ಎಂಆರ್‌ಪಿಯಾಗಿಯೂ ಜವಾಬ್ದಾರಿ ಹೊತ್ತುಕೊಂಡಿರುವೆ ಎಂದು ಆಶಾ ‘ಟೀಚರ್‌’ ವಿವರಿಸಿದರು.

ನಮ್ಮ ತಾಂಡಾದ ಮಕ್ಕಳು ಐದು ವರ್ಷ ನಮ್ಮ ಮನೆಯಲ್ಲೇ ಕಲಿಯುತ್ತಿದ್ದರು. 2005ರಲ್ಲಿ ಆಶಾ, ಶೀಲಾ ಟೀಚರ್‌ ನಮ್ಮ ಊರಿಗೆ ಬಂದರು. ಇವರು ಬಂದ ಬಳಿಕ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಆಗ ನಾನು ಶಾಲೆಯ ಪ್ರೇರಕಿಯಾಗಿದ್ದೆ. ನನ್ನ ಪತಿ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದರು. ಎಲ್ಲರೂ ಸೇರಿ ಸ್ವತಃ ಶಾಲೆ ಕಟ್ಟುವಲ್ಲಿ ಯಶಸ್ವಿಯಾದೆವು. ಇದರಲ್ಲಿ ಆಶಾ ಹೆಗಡೆ ಟೀಚರ್‌ ಪಾತ್ರ ಬಹಳಷ್ಟು ಇದೆ. ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಬಂದಿದ್ದು ತುಂಬಾ ಸಂತೋಷವಾಗಿದೆ ಎಂದು ಸದ್ಯ ಅಂಗನವಾಡಿ ಶಿಕ್ಷಕಿಯಾಗಿರುವ ಕಾಶಿಬಾಯಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next