Advertisement

ಲಿಂಗಾಯತ ಮಾನ್ಯತೆ ಹೋರಾಟಕ್ಕೆ ಬದ್ಧ

12:08 PM May 09, 2019 | Naveen |

ಕಲಬುರಗಿ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕವಾಗಿ ಸ್ವತಂತ್ರ ಧರ್ಮದ ಮಾನ್ಯತೆ ಹೋರಾಟಕ್ಕೆ ಕೂಡಲ ಸಂಗಮ ಧರ್ಮ ಪೀಠ ಹಾಗೂ ಲಿಂಗಾಯತ ಸ್ವಾಭಿಮಾನಿಗಳೆಲ್ಲರೂ ಬದ್ಧರಾಗಿದ್ದಾರೆ ಎಂದು ಕೂಡಲ ಸಂಗಮ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಗಂಗಾ ಮಾತಾಜಿ ಹೇಳಿದರು.

Advertisement

ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳು, ಕಾಯಕ ಶರಣರ ಸಮಾಜಗಳ ಸಂಘಟನೆಗಳ ಆಶ್ರಯದಲ್ಲಿ ನಗರದ ಜಗತ್‌ ವೃತ್ತದ ಬಸವ ಸಾಂಸ್ಕೃತಿಕ ವೇದಿಕೆ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರು ದಿನಗಳ 886ನೇ ಬಸವ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ, ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗಾಯತ ಧರ್ಮ ಯಾರದ್ದೂ ಸ್ವತ್ತಲ್ಲ. ಹೀಗಾಗಿ ಯಾರು ಯಾರನ್ನು ಅವಲಂಬಿ ಸುವಂತಿಲ್ಲ. ಈಗಾಗಲೇ ಲಿಂಗಾಯತ ಧರ್ಮದ ವಿಷಯ ಕುರಿತು ರಾಷ್ಟ್ರದ ಗಮನ ಸೆಳೆಯಲಾಗಿದೆ. ಮುಂದೆಯೂ ಹೋರಾಟ ಮುಂದುವರಿಯಲಿದೆ ಎಂದು ಪುನರ್‌ ಪ್ರಕಟಿಸಿದರು.

ಮೂಗು ತೂರಿಸಬೇಡಿ: ವಿಶ್ವಗುರು ಬಸವಣ್ಣವರು ಸ್ಥಾಪಿಸಿದ ಲಿಂಗಾಯತ ಧರ್ಮವೇ ಬಸವ ಧರ್ಮವಾಗಿದೆ. ಇದು ಸ್ವತಂತ್ರ. ಹೀಗಾಗಿ ಯಾರ ಸೊತ್ತು ಅಲ್ಲ. ಕನ್ನಡ ನೆಲದಲ್ಲಿ ತಳಮಟ್ಟದಿಂದ ಕಟ್ಟಿದ ವಿಶ್ವದ ಮೊದಲ ಧರ್ಮವಾಗಿರುವುದರಿಂದ ಇದಕ್ಕೆ ಯಾರ ಒಪ್ಪಿಗೆ, ಅಪ್ಪಣೆಯೂ ಬೇಕಿಲ್ಲ. ಧರ್ಮದ ಬಗ್ಗೆ ಗೊತ್ತಿಲ್ಲದವರು ಮೂಗು ತೂರಿಸುವ ಕೆಲಸ ಮಾಡಬೇಡಿ ಎಂದು ಚಿಂತಕ ಹಾಗೂ ಸಾಹಿತಿ ಗಂಗಾವತಿಯ ಸಿ.ಎಸ್‌. ನಾರನಾಳ ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ಲಿಂಗಾಯತರಿಗೆ ಮಾತ್ರ ಅವರ ಧರ್ಮದ ಬಗ್ಗೆ ಗೊತ್ತಿದೆ. ಆದರೆ, ಗೊತ್ತಿಲ್ಲದವರು ಮೂಗು ತೂರಿಸಲು ಬರಬೇಡಿ. ಮೊದಲು ನಿಮ್ಮದನ್ನು ನೀವು ನೋಡಿಕೊಳ್ಳಿರಿ. ಪೇಜಾವರ ಶ್ರೀಗಳು ಮತ್ತು ಆರ್‌ಎಸ್‌ಎನ್‌ ಮೋಹನ ಭಾಗವತ್‌ ಅವರು ಲಿಂಗಾಯತ ಧರ್ಮಕ್ಕೆ ಒಪ್ಪಿಗೆ ಕೊಡಲ್ಲ ಎಂದು ಹೇಳಲು ಅವರ್ಯಾರು ಎಂದು ಪ್ರಶ್ನಿಸಿದರು.

Advertisement

ಬಸವ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ, ಕೋಲಿ ಸಮಾಜದ ಹಿರಿಯ ನಾಯಕ ತಿಪ್ಪಣ್ಣಪ್ಪ ಕಮಕನೂರ ಕಾರ್ಯಕ್ರಮ ಉದ್ಘಾಟಿಸಿ, ಈ ಸಲ ನಮ್ಮವರು ಪ್ರಧಾನಿಯಾದರೆ ಮೊದಲು ಲಿಂಗಾಯತ ಸ್ವತಂತ್ರ ಧರ್ಮವಾಗಿ, ಅದಕ್ಕೆ ಸಂವಿಧಾನಿಕ ಮಾನ್ಯತೆ ಕೊಡಿಸುವ ಕೆಲಸ ಮಾಡುತ್ತೇನೆ. ಮೇಲ್ಮನೆಗೆ ಹೋದರೆ ಮೊದಲು ಪ್ರಸ್ತಾಪಿಸಿ ಲಿಂಗಾಯತ ಧರ್ಮದ ಶಿಫಾರಸ್ಸು ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮತ್ತು ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ಬಸವ ಜಯಂತ್ಯುತ್ಸವ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಬಿ. ರಾಂಪುರೆ, ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ, ಲಿಂಗಾಯತ ಮಹಾಸಭಾ ಅಧ್ಕಕ್ಷ ಪ್ರಭುಲಿಂಗ ಮಹಾಗಾಂವಕರ್‌, ಉತ್ಸವ ಸಮಿತಿ ಪದಾಧಿಕಾರಿಗಳಾದ ಬಸವರಾಜ ಮೊರಬದ, ಶಿವಶರಣಪ್ಪ ಕಲಬುರ್ಗಿ, ಪ್ರಮುಖರಾದ ಸೋಮಣ್ಣ ನಡಕಟ್ಟಿ, ಮಲ್ಲಣ್ಣ ನಾಗರಾಳ, ಅಯ್ಯನಗೌಡ ಪಾಟೀಲ, ಮಹಾಂತೇಶ ಕಲಬುರ್ಗಿ, ರಾಜಶೇಖರ ಯಂಕಂಚಿ, ಅಶೋಕ ಘೂಳಿ, ಸಿದ್ಧರಾಮ ಯಳವಂತಗಿ,ಉದಯಕುಮಾರ ಸಾಲಿ, ಶಿವಶರಣ ಕೋಳಾರ, ಬಸವರಾಜ ಧೂಳಾಗುಂಡಿ, ಸತೀಶ ಸಜ್ಜನ, ಬಸವರಾಜ ಬಿರಾದಾರ ಹಾಗೂ ಮುಂತಾದವರಿದ್ದರು.

ಸಮಿತಿ ಕಾರ್ಯದರ್ಶಿ ರವೀಂದ್ರ ಶಾಬಾದಿ ಸ್ವಾಗತಿಸಿದರು. ಸಂಚಾಲಕರಾದ ಆರ್‌.ಜಿ.ಶಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ನಿರೂಪಿಸಿದರು. ಗಿರಿಜಾದೇವಿ ನೃತ್ಯ ಕಲಾ ಕೇಂದ್ರ ಮಕ್ಕಳಿಂದ ವಚನ ನೃತ್ಯ ನಡೆಯಿತು. ಎಂ.ವೈ, ಸುರಪುರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಮಂಗಾಣೆ, ಮಾನ್ಪಡೆಗೆ ಕಾಯಕ ಪ್ರಶಸ್ತಿ
ಕಾರ್ಯಕ್ರಮದ ವೇದಿಕೆ ಮೇಲೆ ಹಿರಿಯ ನ್ಯಾಯವಾದಿ ಬಾಬುರಾವ ಮಂಗಾಣೆ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ, ಹೋರಾಟಗಾರ ಮಾರುತಿ ಮಾನ್ಪಡೆ, ಹೊಟೇಲ್ ಉದ್ಯಮಿ ಶಂಕರ ಪಾಟೀಲ ಬಿಲಗುಂದಿ ಮತ್ತು ಗ್ರಂಥಾಪಾಲಕ ಡಾ| ಮಲ್ಲಿಕಾರ್ಜುನ ವಡ್ಡನಕೇರಾ ಅವರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಕಾರ್ಯದರ್ಶಿ ಶರಣಬಸಪ್ಪ ಪಸ್ತಾಪುರ, ರಾಜಶೇಖರ ಡೊಂಗರಗಾಂವ, ಸಂತೋಷ ಕಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next