Advertisement

ಅಯೋಧ್ಯೆ ತೀರ್ಪು: ಎಲ್ಲೆಡೆ ಕಟ್ಟೆಚ್ಚರ

11:13 AM Nov 10, 2019 | |

ಕಲಬುರಗಿ: ಅಯೋಧ್ಯೆ ವಿವಾದ ಸಂಬಂಧ ಸುಪ್ರಿಂಕೋರ್ಟ್‌ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಶನಿವಾರ ಮಹಾನಗರ ಸೇರಿ ಜಿಲ್ಲಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ನಡೆಯದಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಜಿಲ್ಲಾದ್ಯಂತ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಹಾನಗರ ವ್ಯಾಪ್ತಿಯಲ್ಲಿ ಇಂದು (ರವಿವಾರ) ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿ ಇರಲಿದೆ. ಆದರೆ, ಕೋರ್ಟ್‌ ತೀರ್ಪಿನಿಂದ ಜನ ಜೀವನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಲಿಲ್ಲ.

ಸಹಜ ಸಂಚಾರ-ವಹಿವಾಟು: ನಗರದಲ್ಲಿ ವಾಣಿಜ್ಯ ವಹಿವಾಟು ಹಾಗೂ ವಾಹನ ಸಂಚಾರ ಎಂದಿನಂತೆಯೇ ಶನಿವಾರ ದಿನ ಪೂರ್ತಿ ಇತ್ತು. ಶಾಪಿಂಗ್‌ ಮಾಲ್‌ಗ‌ಳು, ಅಂಗಡಿ ಮುಂಗಟ್ಟುಗಳು, ವಾಹನ ಶೋರೂಂಗಳು ಸೇರಿದಂತೆ ಬಹುತೇಕ ಕಡೆ ಅಂಗಡಿಗಳು ತೆರೆದಿದ್ದವು.

ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರ್ಕೆಟ್‌ ಮತ್ತು ನೆಹರೂ ಗಂಜ್‌ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಿತು. ಎಲ್ಲೆಡೆ ಯಾವುದೇ ಅಗತ್ಯ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯವಾಗಲಿಲ್ಲ. ಹೋಟೆಲ್‌, ಆಸ್ಪತ್ರೆ, ಔಷಧಿ ಮಾರಾಟ ಮಳಿಗೆಗಳು ಹಾಗೂ ಪೆಟ್ರೋಲ್‌ ಬಂಕ್‌ಗಳು ಸಹ ತೆರೆದಿದ್ದವು.

ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಸಾರಿಗೆ ಸಂಸ್ಥೆ ಬಸ್‌ಗಳು, ಆಟೋಗಳು ಹಾಗೂ ಸರಕು ಸಾಗಣೆ ವಾಹನಗಳ ಸಂಚಾರ ಪ್ರತಿನಿತ್ಯದಂತೆ ರಸ್ತೆಗಿಳಿದವು. ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ದಂಡೇ ಇತ್ತು. ಹೀಗಾಗಿ ಜನ-ಜೀವನಕ್ಕೆ ತೊಂದರೆಯಾಗಲಿಲ್ಲ. ಕಚೇರಿಗಳ ಆವರಣ ಖಾಲಿ-ಖಾಲಿ: ಎರಡನೇ ಶನಿವಾರವಾಗಿದ್ದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಿಗೆ ಸರ್ಕಾರಿ ರಜೆಯಿತ್ತು. ಹೀಗಾಗಿ ಜನರು ಸರ್ಕಾರಿ ಕಚೇರಿಗಳತ್ತ ಜನರೂ ಸುಳಿಯಲಿಲ್ಲ. ಜನಜಂಗುಳಿಯಿಂದ ತುಳುಕುತ್ತಿದ್ದ ಮಿನಿ ವಿಧಾನಸೌಧ, ಜಿಪಂ ಕಚೇರಿ, ತಹಶೀಲ್ದಾರ್‌ ಆವರಣಗಳು ಖಾಲಿ-ಖಾಲಿಯಾಗಿದ್ದರು. ಮುಂಜಾಗೃತ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಶುಕ್ರವಾರ ರಾತ್ರಿಯೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು.

Advertisement

ಸಂದೇಶದ ಮೇಲೆ ನಿಗಾ: ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಯಾವುದೇ ತೀರ್ಪು ನೀಡಿದರೂ ನಾಗರಿಕರು ಗೌರವಿಸಬೇಕು. ತೀರ್ಪಿನ ಸಂಬಂಧ ವಿಜಯೋತ್ಸವ ಅಥವಾ ಪ್ರತಿಭಟನೆ ನಡೆಸಬಾರದು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಮತ್ತು ಎಸ್‌ಪಿ ವಿನಾಯಕ ಪಾಟೀಲ, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜು ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರಚೋದಿತ ವಿಜಯೋತ್ಸವ ಅಥವಾ ಪ್ರತಿಭಟನೆಗೆ ಅವಕಾಶವೂ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ, ಕೋಮು ಸೌಹಾರ್ದತೆಗೆ ಭಂಗ ತರುವ ಸಂದೇಶ ಹಾಗೂ ಚಿತ್ರಗಳನ್ನು ಹಾಕಬಾರದು ಎಂದು ಪೊಲೀಸ್‌ ಅಧಿಕಾರಿಗಳು ಕಟ್ಟಪ್ಪಣೆ ಮಾಡಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳ ಮೇಲೆ ರವಿವಾರ ಕೂಡ ಪೊಲೀಸರು ತೀವ್ರ ನಿಗಾ ವಹಿಸಲಿದ್ದಾರೆ.

ಪೊಲೀಸರ ಹದ್ದಿನ ಕಣ್ಣು: ತೀರ್ಪಿನ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳು, ಧಾರ್ಮಿಕ ಸ್ಥಳಗಳ ಸುತ್ತಮುತ್ತ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿತ್ತು.

ಜೇವರ್ಗಿ ರಸ್ತೆಯಲ್ಲಿರುವ ರಾಮ ಮಂದಿರಕ್ಕೂ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್‌ ವೃತ್ತ ಹಾಗೂ ಪ್ರಮುಖ ವೃತ್ತಗಳು ಹಾಗೂ ರಿಂಗ್‌ ರೋಡ್‌ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮಹಾನಗರದಲ್ಲಿ ಒಟ್ಟು ನಾಲ್ಕು ಸಾವಿರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಒಬ್ಬರು ಡಿಸಿಪಿ, ಐವರು, ಎಸಿಪಿಗಳು, 18 ಇನ್ಸ್‌ಪೆಕ್ಟರ್‌ ಗಳು, 230 ಮುಖ್ಯಪೇದೆಗಳು, 480 ಪೇದೆಗಳು, 150 ಹೋಮ್‌ ಗಾರ್ಡ್‌ಗಳು, ನಾಲ್ಕು ರಾಜ್ಯ ಮೀಸಲು ಪಡೆಗಳು ಮತ್ತು ಐದು ಜಿಲ್ಲಾ ಮೀಸಲು ಪಡೆಗಳನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಯಿತು. ಹಿರಿಯ ಪೊಲೀಸ್‌ ಅ ಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next