ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗದ ತರಬೇತಿ ನೀಡಿ ಜಪಾನ್‌ಗೆ ಕಳಿಸುವ ವ್ಯವಸ್ಥೆಯನ್ನು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳು ಜೊತೆಗೂಡಿ ಮಾಡಲಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಹೇಳಿದರು.
ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ರವಿವಾರ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಸ್ಥಾಪನಾ ದಿನ, ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಪಾನಿನಲ್ಲಿ ಮೂರು ಲಕ್ಷ ಭಾರತೀಯ ಯುವಕರಿಗೆ ಉದ್ಯೋಗ ನೀಡುವಂತೆ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ನಮ್ಮ ಯುವಕರು ತೆರಳುಲು ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಯುವಕರಿಗೆ ನಮ್ಮೂರಲ್ಲೇ ನಮಗೆ ಕೆಲಸ ಸಿಗಬೇಕೆಂದು ಜನರು ಬಯಸುತ್ತಾರೆ. ಹೀಗಾಗಿ ವಿದೇಶಗಳಲ್ಲಿ ಕೆಲಸಕ್ಕೆ ಹೋಗಲು ಹಿಂಜರಿಯುತ್ತಾರೆ. ಕೀಳರಿಮೆ ಭಾವನೆಯಿಂದ ಹೊರ ಬಂದರೆ, ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಸಾಧ್ಯ. ಆದ್ದರಿಂದ ಜಪಾನಿಗೆ ಮೂರು ಲಕ್ಷ ಯುವಕರನ್ನು ಕಳಿಸುವ ಕಾರ್ಯ ನಡೆದಿದೆ. ಜಪಾನ್‌ನಲ್ಲಿ ಅಗತ್ಯವಿರುವ ಎಲ್ಲ ತರಬೇತಿ ನೀಡಿ, ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಯೋಚನೆ ಹೊಂದಲಾಗಿದೆ. ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಉದ್ಯಮ ಸ್ಥಾಪನೆಗೆ ಕಲಬುರಗಿ ಜಿಲ್ಲೆ ಪೂರಕವಾಗಿದೆ. ಈ ಭಾಗದ ಯುವಕರಿಗೆ ಉದ್ಯೋಗ ಸಿವಂತಾಗಬೇಕೆಂದು ನುಡಿದರು.
ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ಎಚ್‌ಕೆಸಿಸಿಐ ಈ ಭಾಗದಲ್ಲಿ ಅಭಿವೃದ್ಧಿಗೆ ತನ್ನದೇ ಆದ ಶ್ರಮವಹಿಸುತ್ತಿದೆ.ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಉದ್ಯಮಿದಾರರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದರು.
ಸಂಸದ ಡಾ| ಉಮೇಶ ಜಾಧವ ಮಾತನಾಡಿದರು. ಶರಣಬಸವೇಶ್ವರ ಮಹಾ ದಾಸೋಹದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ, ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧೀಪತಿ ಡಾ| ಸೈಯದ್ ಶಹಾ ಖುಸ್ರೋ ಹುಸೇನಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ, ಹಿರಿಯ ಉದ್ಯಮಿ ಡಾ| ಎಸ್.ಎಸ್. ಪಾಟೀಲ ಕಡಗಂಚಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣು ಪಪ್ಪಾ, ಶಶಿಕಾಂತ ಪಾಟೀಲ, ರವಿಕುಮಾರ ಸರಸಂಬಿ, ಆನಂದ ದಂಡೋತಿ, ಆರ್.ಕೆ. ಜಗದೀಶ ಕಡಗಂಚಿ, ಶಿವರಾಜ ಇಂಗಿನ್, ಚನ್ನಬಸಯ್ಯ ನಂದಿಕೋಲಮಠ, ಮಹೇಶ ರಂಗದಾಳ, ಗೋಪಾಲ ಬುಚನಳ್ಳಿ ಹಾಜರಿದ್ದರು.