Advertisement

ಜನಜಾಗೃತಿ ರಾಜಕಾರಣಿಗಳಿಗೆ ಬೇಕಿಲ್ಲ

02:58 PM Jul 19, 2019 | Naveen |

ಕಲಬುರಗಿ: ಜನರಿಗೆ ಶಿಕ್ಷಣ, ಉದ್ಯೋಗ ಕೊಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು ರಾಜಕಾರಣ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳಿಗೆ ಬೇಕಾಗಿಲ್ಲ. ಸಮಾಜದಲ್ಲಿ ಸ್ಥಾಯಿಭಾವ ಉಳಿಸುವ ರಂಗಭೂಮಿಯವರೇ ನಿಜ ಜನಪ್ರತಿನಿಧಿಗಳು ಎಂದು ಹಿರಿಯ ನಟ, ನಿರ್ದೇಶಕ, ರಂಗಕರ್ಮಿ ಪ್ರಕಾಶ ಬೆಳವಾಡಿ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ರಂಗ ಸಂಗಮ ಕಲಾ ವೇದಿಕೆ ವತಿಯಿಂದ ಹವ್ಯಾಸಿ ರಂಗಭೂಮಿ ನಿರ್ದೇಶಕ ಡಾ| ಶ್ರೀಪಾದ ಭಟ್ ಧಾರೇಶ್ವರ ಅವರಿಗೆ ಎಸ್‌.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಎಲ್ಲ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಬೆಂಗಳೂರಿಗೆ ಸೇರಿ ಬಿಡುತ್ತಾರೆ. ಅವರ ಮಕ್ಕಳು ಯಾವುದೋ ಲಾಭದಾಯ ವ್ಯಾಪಾರ ಮಾಡುತ್ತಾ ಜನರ ಬಗ್ಗೆ ಚಿಂತಿಸುವುದಿಲ್ಲ. ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಿ ಅವರನ್ನು ಜಾಗೃತರನ್ನಾಗಿ ಮಾಡಿದರೆ, ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ ಎನ್ನುವ ಭಯ ಜನಪ್ರತಿನಿಧಿಗಳಿಗೆ ಇದೆ. ಜನತೆ ನಮ್ಮ ಮೇಲೆಯೇ ಅವಲಂಬಿತರಾಗಿರಲಿ ಎಂದು ಅವರು ಬಯಸುತ್ತಿದ್ದಾರೆ. ಇದು ಎಲ್ಲ ಪಕ್ಷಗಳಿಗೂ ಅನ್ವಯ ಎಂದರು.

ರಾಜಕಾರಣಕ್ಕೆ ತದ್ವಿರುದ್ಧವಾಗಿದ್ದು ರಂಗಭೂಮಿ. ಸಮಾಜದ ಅನುಭವವನ್ನು ಕಟ್ಟಿಕೊಟ್ಟು ಏನಾದರೂ ಸ್ಥಾಯಿಭಾವವನ್ನು ರಂಗಭೂಮಿ ಉಳಿಸುತ್ತದೆ. ರಂಗಭೂಮಿಗೆ ದೊಡ್ಡ ಬಂಡವಾಳ ಬೇಕಾಗಿಲ್ಲ. ದೊಡ್ಡ ಸಮುದಾಯ, ಪ್ರೇಕ್ಷಕ ವರ್ಗದ ಅಗತ್ಯವಿಲ್ಲ. ನಟನೆ ನೈಪುಣ್ಯತೆ, ನಾಟಕ ನೋಡುವ ಸಹೃದಯರು ಇದ್ದರೆ ಸಾಕು. ರಂಗಭೂಮಿ ನಾಟಕದಿಂದ ಸಮಾಜಕ್ಕೆ ದೊಡ್ಡ ಸಂದೇಶ ಮುಟ್ಟಿಸಬಹುದು ಎಂದು ಹೇಳಿದರು.

ಶೇ. 70 ಆದಾಯ ಬೆಂಗಳೂರಿಗೆ ಖರ್ಚು: ಕರ್ನಾಟಕದ ಆದಾಯದಲ್ಲಿ ಶೇ.70ರಷ್ಟು ಆದಾಯ ಬೆಂಗಳೂರಿನಲ್ಲೇ ಕ್ರೋಢೀಕರಣವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಬೆಂಗಳೂರು ಅಭಿವೃದ್ಧಿಗೆ ರಾಜ್ಯದ ಶೇ.70ರಷ್ಟು ಆದಾಯವನ್ನು ಖರ್ಚು ಮಾಡಲಾಗುತ್ತದೆ ಎಂದು ಹೇಳಿದರು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಶ್ರೀಪಾದ ಭಟ್, ನನ್ನ ರಂಗಭೂಮಿ ಪ್ರವೇಶ ಒಂದು ಆಕಸ್ಮಿಕ. ಒಲವು, ಸ್ನೇಹ, ಪ್ರೇಮ ರಂಗಕರ್ಮಿಗಳ ಜೀವಾಳ. 30 ವರ್ಷಗಳಿಂದ ರಂಗಭೂಮಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಮೂಹವನ್ನು ಗ್ರಹಿಸುವ ಪಾಠವನ್ನು ಎರಡೂ ಕ್ಷೇತ್ರಗಳಿಂದ ಕಲಿತಿದ್ದೇನೆ. ರಂಗಭೂಮಿ ಇಲ್ಲದೆ ಬದುಕಲು ನನಗೆ ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ ಆಧ್ಯಕ್ಷತೆ ವಹಿಸಿದ್ದರು. ರಂಗ ಸಮಾಜದ ಕಲಾ ವೇದಿಕೆ ಕಾರ್ಯದರ್ಶಿ ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿದರು. ಪ್ರಶಸ್ತಿ ಪುರಸ್ಕೃತರ ಬಗ್ಗೆ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ಎಸ್‌.ಬಿ. ಜಂಗಮಶೆಟ್ಟಿ ಕುರಿತು ರಂಗಕರ್ಮಿ ಎಚ್.ಎಸ್‌. ಬಸವಪ್ರಭು ಮಾತನಾಡಿದರು.

ಕಲಾವೇದಿಕೆ ಅಧ್ಯಕ್ಷೆ ನಂದಾ ಕೆಲ್ಲೂರ, ಸುಭದ್ರಾ ದೇವಿ, ಉಡುಪಿಯ ಯಕ್ಷರಂಗ ತಜ್ಞ, ವಿದ್ವಾನ್‌ ಸುಧೀರರಾವ್‌, ಹಿರಿಯ ರಂಗಕರ್ಮಿ ಎಲ್ಬಿಕೆ ಆಲ್ದಾಳ, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next