ಕಲಬುರಗಿ: ಐಟಿ ಹಬ್ ಸ್ಥಾಪಿಸುವ ಉದ್ದಿಮೆದಾರರಿಗೆ ಕಲಬುರಗಿ ವಿಮಾನ ನಿಲ್ದಾಣದಿಂದ ಪ್ರಯಾಣದ ವೆಚ್ಚ ಕಡಿತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ ಶ್ರೀವಾಸ್ತವ ತಿಳಿಸಿದರು.
ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ವಿಮಾನ ನಿಲ್ದಾಣದ ಭದ್ರತೆಗೆ ಅವಶ್ಯಕವಿರುವ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಹದಿನೈದು ದಿನಗಳ ಮೊದಲು ಒದಗಿಸಿದರೆ, ನ.1ರ ರಾಜ್ಯೋತ್ಸವದ ದಿನದಂದೇ ವಿಮಾನ ನಿಲ್ದಾಣ ಉದ್ಘಾಟಿಸಲು ವಿಮಾನಯಾನ ಇಲಾಖೆ ಬದ್ಧವಾಗಿದೆ ಎಂದು ಸ್ಪಷ್ಟ ಪಡಿಸಿದರು.
ಈಗಾಗಲೇ ವಿಮಾನಯಾನ ಸಂಸ್ಥೆಗಳಾದ ಅಲೈನ್ಸ್ ಏರ್‌ಲೈನ್ಸ್ ಮತ್ತು ಸ್ಟಾರ್ ಏರ್ ವೇಸ್‌ಗಳು ವಿಮಾನ ಹಾರಾಟಗಳಿಗೆ ಸಿದ್ಧವಾಗಿವೆ. ತಿರುಪತಿ, ಬೆಂಗಳೂರು ಮತ್ತು ದೆಹಲಿಗೆ ವಿಮಾನಯಾನ ಸೇವೆ ಒದಗಿಸಲು ಮುಂದಾಗಿವೆ. ಕಲಬುರಗಿ ನಗರವು ವಾಣಿಜ್ಯ ನಗರವಾಗಿದ್ದು, ಅದರ ಸುತ್ತಮುತ್ತ ಅನೇಕ ನಗರಗಳಿಂದ ಕೂಡಿದೆ ಮತ್ತು ವಿದ್ಯಾರ್ಥಿ ಸಮುದಾಯವನ್ನು ಹೊಂದಿದೆ. ಮುಖ್ಯವಾಗಿ
ವಾಣಿಜ್ಯ ವರ್ತಕರು ಇರುವುದರಿಂದ ವಿಮಾನಯಾನ ಸಂಪರ್ಕಕ್ಕೆ ಸೂಕ್ತವಾದ
ನಗರವಾಗಿದೆ.
ನಗರದಲ್ಲಿ ಐಟಿ ಹಬ್ ಸ್ಥಾಪಿಸಲು ಆಗಮಿಸುವ ಉದ್ದಿಮೆದಾರರಿಗೆ ವಿಮಾನಯಾನ ಪ್ರಯಾಣದ ಸಮಯದಲ್ಲಿ ಮತ್ತು ವಸತಿ ಹಾಗೂ ಇತರ ವೆಚ್ಚಗಳನ್ನು ಕಡಿತ ಮಾಡಲಾಗುವುದು. ಇದರಿಂದ ಸುಲಭವಾಗಿ ವಿಮಾನಯಾನ ಪ್ರಯಾಣವನ್ನು ಆಯ್ಕೆ ಮಾಡುವುದರಲ್ಲಿ ಕಲಬುರಗಿ ವಿಮಾನ ನಿಲ್ದಾಣವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕೆನರಾ ಬ್ಯಾಂಕಿನ ಎಜಿಎಂ ಎಚ್.ಕೆ. ಗಂಗಾಧರ ಮಾತನಾಡಿ, ಕಲಬುರಗಿ ನಗರಕ್ಕೆ ವಿಮಾನಯಾನ ಸಂಪರ್ಕ ಇಲ್ಲದ ಕಾರಣ ಇಲ್ಲಿಯವರೆಗೆ ಅಂದಾಜು ಶೇ.30ರಷ್ಟು ಬ್ಯಾಂಕಿನ ಹಿರಿಯ ಅ ಧಿಕಾರಿಗಳು ಆಗಮಿಸಲು ಸಾಧ್ಯವಾಗಿಲ್ಲ. ಕಲಬುರಗಿ ವಿಮಾನ ನಿಲ್ದಾಣವನ್ನು ವಾಣಿಜ್ಯ ಉದ್ದೇಶಕ್ಕಾಗಿ ಪ್ರಾರಂಭಿಸಿದ ಒಂದು ತಿಂಗಳಲ್ಲಿ ಬ್ಯಾಂಕಿನಿಂದಲೇ 20ರಿಂದ 30 ಟಿಕೆಟ್‌ಗಳು ಬುಕ್ ಆಗಲಿವೆ ಎನ್ನುವ ಆಶಯ ವ್ಯಕ್ತಪಡಿಸಿದರು. ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿದರು. ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ಹಾಜರಿದ್ದರು.