Advertisement

ಕಲಬುರಗಿ ಜನರ ವಿಮಾನಯಾನ ಕನಸು ವಾರದಲ್ಲಿ ಸಾಕಾರ

10:58 AM Nov 14, 2019 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ವಿಮಾನಯಾನದ ಕನಸು ಇನ್ನೊಂದು ವಾರದೊಳಗೆ ಸಾಕಾರಗೊಳ್ಳುತ್ತಿದೆ. ಕೊಲ್ಲಾಪುರದ ಪ್ರಖ್ಯಾತ ಸಂಜಯ್‌ ಘೋಡಾವತ್‌ ಸಮೂಹ ಸಂಸ್ಥೆಯ “ಸ್ಟಾರ್‌ ಏರ್‌’ ಇದೇ ನ.22ರಿಂದ ಕಲಬುರಗಿಯನ್ನು ರಾಜಧಾನಿ ಬೆಂಗಳೂರು ಜತೆ ಬೆಸೆಯಲಿದೆ.

Advertisement

“ಉಡಾನ್‌’ ಯೋಜನೆಯಡಿ ಈಶಾನ್ಯ ಕರ್ನಾಟಕದೊಂದಿಗೆ ದೇಶವನ್ನು ಸಂಪರ್ಕಿಸುವ ಕಾರ್ಯಕ್ಕೆ “ಸ್ಟಾರ್‌ ಏರ್‌’ ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ರಾಜ್ಯದ ರಾಜಧಾನಿಗೆ ವಿಮಾನ ಹಾರಾಟ ಆರಂಭಿಸುತ್ತಿದ್ದು, ಕಲಬುರಗಿಯಿಂದ ಸೇವೆ ಆರಂಭಿಸಿದ ಮೊದಲ ಏರ್‌ ಲೈನ್‌ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಸಾಮಾಜಿಕ, ರಾಜಕೀಯ, ಉದ್ಯಮ ಕ್ಷೇತ್ರಗಳ ದಿಗ್ಗಜರು ನೂತನ ವಿಮಾನಯಾನ ಸೇವೆ ಆರಂಭಕ್ಕೆ ಸಾಕ್ಷಿಯಾಗುವರು. “ಸಂಪರ್ಕ ಇಲ್ಲದೆಡೆ ಸಂಪರ್ಕ ಕಲ್ಪಿಸುವ ಹಾಗೂ ವಿಶ್ವದರ್ಜೆಯ ಸೇವೆ ಒದಗಿಸುವ ಬಯಕೆಯಿಂದ ನಾವು ವಾಯುಯಾನ ಸೇವೆ ಒದಗಿಸುತ್ತಿದ್ದೇವೆ. “ಸ್ಟಾರ್‌ ಏರ್‌’ ಸೇವೆಯನ್ನು ವಿಸ್ತರಿಸುತ್ತಿದ್ದು, ಹೊಸ ಹೊಸ ತಾಣಗಳಿಗೆ ಸೇವೆ ನೀಡುತ್ತ ಸರಿಯಾದ ಪಥದಲ್ಲಿ ಸಾಗುತ್ತಿದ್ದೇವೆ. ಪ್ರಯಾಣಿಕರ ಸುರಕ್ಷತೆ, ಸುಖಪ್ರಯಾಣಕ್ಕೆ ಪ್ರಾಶಸ್ತ್ಯ ನೀಡುವುದರಿಂದ ಗ್ರಾಹಕರು “ಸ್ಟಾರ್‌ ಏರ್‌’ ವಿಮಾನಗಳಲ್ಲಿಯೇ ಪ್ರಯಾಣ ಮಾಡಲು ಇಷ್ಟಪಡುತ್ತಾರೆ’ ಎಂದು “ಸಂಜಯ ಘೋಡಾವತ್‌’ ಗ್ರೂಪ್‌ ಚೇರ¾ನ್‌ ಸಂಜಯ ಘೋಡಾವತ್‌ ಅಭಿಪ್ರಾಯಪಡುತ್ತಾರೆ. “ಸ್ಟಾರ್‌ ಏರ್‌’ ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಒದಗಿಸಲು ಉತ್ಸುಕವಾಗಿದೆ.

ಈ ಸೇವೆಯಿಂದ ವಿಜಯಪುರ, ರಾಯಚೂರು, ಬೀದರ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಬೆಂಗಳೂರಿಗೆ ತ್ವರಿತವಾಗಿ ಹಾಗೂ ಅಡತಡೆಯಿಲ್ಲದೇ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು “ಸ್ಟಾರ್‌ ಏರ್‌’ ಸಿಇಒ ಸಿಮ್ರನ್‌ ಸಿಂಗ್‌ ತಿವಾನ ಹೇಳುತ್ತಾರೆ.

“ಸ್ಟಾರ್‌ ಏರ್‌’ ವಾಣಿಜ್ಯ ವಾಯುಯಾನಕ್ಕಾಗಿ “ಎಂಬ್ರಾರ್‌’ ಸಂಸ್ಥೆ ತಯಾರಿಸಿದ “ರೋಲ್ಸ್‌ ರಾಯ್ಸ’ ಎರಡು ಜೆಟ್‌ ಎಂಜಿನ್‌ ಹೊಂದಿರುವ 50 ಸೀಟುಗಳ ಸುಧಾರಿತ ಏರ್‌ ಕ್ರಾಫ್ಟ್‌ಗಳನ್ನು ಬಳಕೆ ಮಾಡುತ್ತದೆ. “ಸ್ಟಾರ್‌ ಏರ್‌’ ಉಡಾನ್‌ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ವಿಮಾನಗಳ ಶೇ.50ರಷ್ಟು ಸೀಟ್‌ಗಳು ಅಗ್ಗದ ದರದಲ್ಲಿ ಲಭ್ಯವಾಗಲಿವೆ.

Advertisement

ಇದರಿಂದ ಜನಸಾಮಾನ್ಯರು ಕಡಿಮೆ ಖರ್ಚಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರು-ಕಲಬುರಗಿ ಮಧ್ಯೆ ಪ್ರತಿ ಟಿಕೆಟ್‌ಗೆ ಆರಂಭಿಕ ದರವಾಗಿ ರೂ. 2850 ನಿಗದಿಪಡಿಸಲಾಗಿದೆ. ಪ್ರಸ್ತುತ ಸ್ಟಾರ್‌ ಏರ್‌ ದೇಶದ ಮುಂಬೈ, ಬೆಂಗಳೂರು, ಅಹ್ಮದಾಬಾದ್‌, ತಿರುಪತಿ, ಹುಬ್ಬಳ್ಳಿ, ದೆಹಲಿ (ಹಿಂಡನ್‌) ಹಾಗೂ ಬೆಳಗಾವಿ ನಗರಗಳಿಗೆ ಸೇವೆ ಒದಗಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next