ನವದೆಹಲಿ: ಸಾಹಿತಿ, ವಿಮರ್ಶಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಧಾನ ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಮುಂದುವರಿದಿದೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ನ್ಯಾ.ಆರ್.ಎಫ್. ನಾರಿಮನ್ ಮತ್ತು ನ್ಯಾ.ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡಿದೆ.
ಇದರ ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯೂ ಮುಕ್ತಾಯವಾಗಿದ್ದು, ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿದೆ ಎಂದು ತಂಡ ಉಲ್ಲೇಖೀಸಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಇನ್ನು ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಲಿ ಎಂದು ಹೇಳಿದೆ.
ಕಲಬುರ್ಗಿ ಪತ್ನಿ ಅರ್ಜಿ ಇತ್ಯರ್ಥ: ಪತಿಯ ಹತ್ಯೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ತನಿಖೆ ನಡೆಸಬೇಕು ಎಂದು ಕಲಬುರ್ಗಿಯವರ ಪತ್ನಿ ಉಮಾ ದೇವಿ ಸುಪ್ರೀಂಕೋರ್ಟ್‌ಗೆ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಬಗ್ಗೆಯೂ ವಿಚಾರಣೆ ನಡೆಸಿದ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್‌ನ ಉಸ್ತುವಾರಿಯಲ್ಲಿ ತನಿಖೆ-ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಮತ್ತೂಮ್ಮೆ ಅದನ್ನು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿತು.
ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಹತ್ಯೆ ಮತ್ತು ಪತಿಯ ಕೊಲೆ ಘಟನೆಯಲ್ಲಿ ಸಾಮ್ಯತೆ ಇದೆ ಎಂದು ಉಮಾ ದೇವಿ ವಾದಿಸಿದ್ದರು. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯಿಂದಲೇ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಕಲಬುರ್ಗಿ ಅವರನ್ನು 2015 ಆ.30ರಂದು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.