Advertisement

ಮತ ನೀಡಿ ಬಾಬಾ ಕನಸು ನನಸಾಗಿಸಿ

11:10 AM Apr 15, 2019 | Naveen |

ಕಲಬುರಗಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಚುನಾವಣೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕೆಂಬ ಕನಸು ಕಂಡಿದ್ದರು. ಅವರ ಕನಸು ನನಸಾಗಿಸಲು ಏ.23ರಂದು ನಡೆಯುವ ಲೋಕಸಭೆ ಚುನಾವಣೆ ದಿನದಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕೆಂದು ಜಿಲ್ಲಾ ಧಿಕಾರಿ ಆರ್‌.ವೆಂಕಟೇಶಕುಮಾರ ಕರೆ ನೀಡಿದರು.

Advertisement

ನಗರದ ಜಗತ್‌ ವೃತ್ತದಲ್ಲಿ ರವಿವಾರ ಜಿಲ್ಲಾಡಳಿತ, ಜಿಪಂ, ಸಮಾಜ
ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತರತ್ನ ಡಾ| ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 128ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ಬಾಳುತ್ತಿರುವುದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇರದಿದ್ದರೆ ಯಾರೂ ಸ್ವತಂತ್ರರಾಗಿ ಹಾಗೂ ಸಮಾನರಾಗಿ ಬದುಕುತ್ತಿರಲಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಣಾ ಅಧಿ
ಕಾರಿ ಡಾ| ಪಿ.ರಾಜಾ ಮಾತನಾಡಿ, ಅಂಬೇಡ್ಕರ್‌ ಎಲ್ಲ ಕ್ಷೇತ್ರಗಳಿಗೂ
ತಮ್ಮ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ,
ರಾಜಕೀಯ, ಶೈಕ್ಷಣಿಕವಾಗಿ ಸಮಾನತೆ ತರುವಲ್ಲಿ ಶ್ರಮಿಸಿದ್ದಾರೆ.
ಅಸ್ಪೃಶ್ಯತೆ ಹೋಗಲಾಡಿಸಲು ಹಾಗೂ ಮಹಿಳೆಯರ ಹಕ್ಕುಗಳಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.

ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಡಾ| ಪುಟ್ಟಮಣಿ ದೇವಿದಾಸ ಉಪನ್ಯಾಸ ನೀಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ಬದುಕಿನ ಪ್ರತಿಯೊಂದು ಕ್ಷಣವೂ ಅರ್ಥ ಗರ್ಭಿತವಾಗಿತ್ತು. ಸದಾ ಸಮಾಜದ ಒಳಿತಿನ ಬಗ್ಗೆ ಅವರು ಚಿಂತನೆ ಮಾಡುತ್ತಿದ್ದರು. ಅಂದಿನ ಕಾಲದ ಅಸಾಧ್ಯತೆಗಳ ಮಧ್ಯೆ ಅವರು ಸಮಾಜದಲ್ಲಿ ಸಮಾನತೆ ಸಾಧಿಸಲು ಪ್ರಯತ್ನಿಸಿದರು ಎಂದು ಹೇಳಿದರು.

Advertisement

ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಪೂಜ್ಯ ಸಂಘಾನಂದ ಭಂತೇಜಿ, ಐಜಿಪಿ ಮನೀಷ ಖರ್ಬೀಕರ್‌, ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಸಹಾಯಕ ಆಯುಕ್ತ ರಾಹುಲ್‌ ತುಕಾರಾಂ ಪಾಂಡ್ವೆ, ಐಎಎಸ್‌ ಪ್ರೊಬೇಷನರಿ ಅ ಧಿಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ,
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಹೆಚ್ಚುವರಿ ಎಸ್‌ಪಿ ಪ್ರಸನ್ನ
ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್‌. ಸತೀಶ, ಮುಖಂಡರಾದ ಅವಿನಾಶ ಗಾಯಕವಾಡ, ಸೋಮಶೇಖರ ಮದನಕರ, ಬಾಬು ಮೋರೆ ಮುಂತಾದವರು ಪಾಲ್ಗೊಂಡಿದ್ದರು.

ದೇಶಕ್ಕೆ ವೇದಗಳ ಅವಶ್ಯಕತೆಯಿದ್ದಾಗ ವೇದವ್ಯಾಸರು
ವೇದ ಬರೆದಿದ್ದಾರೆ. ದೇಶಕ್ಕೆ ಪುರಾಣದ ಅವಶ್ಯಕತೆಯಿದ್ದಾಗ
ವಾಲ್ಮೀಕಿ ಪುರಾಣ ಬರೆದಿದ್ದಾರೆ. ಅದೇ ರೀತಿ ದೇಶಕ್ಕೆ ಸಂವಿಧಾನ
ಅವಶ್ಯಕತೆಯಿದ್ದಾಗ ಡಾ| ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ
ರಚಿಸಿದ್ದಾರೆ. ಇದುವೇ ತಳಸಮುದಾಯದ ವಿಶೇಷತೆ.
ತಳ ಸಮುದಾಯ ಎಂದರೆ ದೇಶದಲ್ಲಿ ಸಮಾಜ ಕಟ್ಟುವ
ಸಮುದಾಯವಾಗಿದೆ. ಕಾರಣ ತಳ ಸಮುದಾಯದವರು
ಯಾರೂ ತಮ್ಮ ಜಾತಿಯನ್ನು ಮುಚ್ಚಿಡಬಾರದು.
ಡಾ| ಪುಟ್ಟಮಣಿ ದೇವಿದಾಸ, ಪ್ರಾಧ್ಯಾಪಕಿ

Advertisement

Udayavani is now on Telegram. Click here to join our channel and stay updated with the latest news.

Next