ಕಲಬುರಗಿ: ಜಿಲ್ಲೆಯಲ್ಲಿ ಮೂರು ದಶಕಗಳ ನಂತರ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣಿಕರ್ತರಾದವರಲ್ಲಿ ರಕ್ಷಣಾ ಪಡೆ ಶ್ರಮವೂ ಅಡಗಿದೆ.
ಸಮವಸ್ತ್ರ ಧರಿಸಿ ಊಟದ ವಿಭಾಗದಲ್ಲಿ ಟೊಂಕ ಕಟ್ಟಿ ನಿಂತ ಯುವಕ-ಯುವತಿಯರೇ ಸಮ್ಮೇಳನದ ರಕ್ಷಣಾ ಪಡೆ. ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ಊಟದ ವೇಳೆ ಎಲ್ಲಿಯೂ ಗೋಜು-ಗದ್ದಲ ಏರ್ಪಡದಂತೆ ನೋಡಿಕೊಳ್ಳಲು ಸೂಚಿಸಲಾಗಿತ್ತು. ಈ ಕಟ್ಟಪ್ಪಣೆಯನ್ನು ಎಳ್ಳಷ್ಟು ಉಲ್ಲಂಘಿಸದಂತೆ ಅವರು ಕರ್ತವ್ಯ ನಿರ್ವಹಿಸಿದ ಪರಿಯೇ ವಿಶೇಷ.
ಬೆಳಗ್ಗೆ 7:39ಕ್ಕೆಲ್ಲ ಹಾಜರಾಗುತ್ತಿದ್ದ ವಿದ್ಯಾರ್ಥಿಗಳು ಸಂಜೆ 9 ಗಂಟೆಯಾದರೂ ನಿರ್ಗಮಿಸುತ್ತಿರಲಿಲ್ಲ. ವಿದ್ಯಾರ್ಥಿನಿಯರಿಗೆ ಮಾತ್ರ ತುಸು ರಿಯಾಯ್ತಿ ನೀಡಿ ಸಂಜೆ 5:30ಕ್ಕೆ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ, ವಿದ್ಯಾರ್ಥಿಗಳು ಮಾತ್ರ ರಾತ್ರಿ ಊಟದ ಗಲಾಟೆ ಕಡಿಮೆ ಆದ ಮೇಲೆಯೇ ವಿರಮಿಸುತ್ತಿದ್ದರು. ಸ್ಥಳೀಯ ಯುವಕರು ಮನೆಗಳಿಗೆ ತೆರಳಿದರೆ, ದೂರದೂರುಗಳಿಂದ ಬಂದವರು ಮಾತ್ರ ಸಮ್ಮೇಳನದ ಟೆಂಟ್‌ನಲ್ಲಿಯೇ ಮೂರು ದಿನ ಕಳೆದರು.
ವಿದ್ಯಾರ್ಥಿಗಳು ಮಾಡಿದ ಕೆಲಸ ಸಣ್ಣದಾದರೂ ಅದರ ಮಹತ್ವ ದೊಡ್ಡದೇ. ಮಹಿಳೆಯರು, ಪುರುಷರನ್ನು ಪ್ರತ್ಯೇಕ ಕೌಂಟರ್‌ಗಳಿಗೆ ಕಳುಹಿಸುವುದು, ಜನರನ್ನು ಚದುರಿಸುವುದು, ಸರದಿಯಲ್ಲಿ ನಿಲ್ಲಿಸುವುದು, ಗಲಾಟೆಯಾಗದಂತೆ ನೋಡಿಕೊಳ್ಳುವುದು, ನೀರಿನ ಮಿತ ಬಳಕೆಗೆ ಸೂಚಿಸುವುದು, ಒಂದು ವೇಳೆ ಜನಸಂದಣಿ ಹೆಚ್ಚಾಗಿ ಊಟ ನೀಡುವವರು ಸಿಗದಿದ್ದಲ್ಲಿ ತಾವೇ ಊಟ ಬಡಿಸುವುದು, ಊಟಬಡಿಸುವವರಿಗೆ ಅಗತ್ಯ ಪದಾರ್ಥ ಪೂರೈಸುವುದು ಹೀಗೆ ತರಹೇವಾರಿ ಸೇವೆ ನೀಡುತ್ತಲೇ ಇದ್ದರು. ತಮ್ಮೊಳಗೆ ಯಾರಾದರೂ ಕಾಲಕ್ಷೇಪ ಮಾಡಿದರೂ ಸಹಿಸದಷ್ಟು ಕರ್ತವ್ಯ ಪ್ರಜ್ಞೆ ಅವರಲ್ಲಿ ಜಾಗೃತವಾಗಿತ್ತು.
ಮೂರನೇ ದಿನ ಜನಸಂದಣಿ ಕಡಿಮೆಯಾದಾಗಲೇ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದು. ಈ ರಕ್ಷಣಾ ಪಡೆ ಇಲ್ಲದಿದ್ದರೆ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ ಎನ್ನುವುದು ಕಟು ವಾಸ್ತವ.