Advertisement

ಶಿಕ್ಷಕರ ಕೊರತೆ ನೀಗಿಸಲು ಸ್ಥಳೀಯರಿಗೆ ಅವಕಾಶ

11:11 AM Oct 31, 2019 | Naveen |

ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕಾತಿ ಮತ್ತು ವರ್ಗಾವಣೆ ಸಂದರ್ಭದಲ್ಲಿ ಸ್ಥಳೀಯರಿಗೆ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ ಹೇಳಿದರು.

Advertisement

ನಗರದ ಜಿ.ಪಂ ಸಭಾಂಗಣದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆ ಭಾಗಗಳಿಗೆ ಹೋಲಿಕೆ ಮಾಡಿದರೆ, ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಇದೆ. ಇದಕ್ಕೆ ಕೆಲ ಪ್ರಮುಖ ಕಾರಣಗಳನ್ನು ಸದ್ಯಕ್ಕೆ ಕಂಡುಕೊಳ್ಳಲಾಗಿದೆ ಎಂದರು.

ಮುಖ್ಯವಾಗಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಹೀಗಾಗಿ ಶಿಕ್ಷಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಶಿಕ್ಷಕರ ವರ್ಗಾವಣೆ ವಿಭಾಗದ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಬೇರೆ ವಿಭಾಗಗಳಿಗೆ ವರ್ಗಾವಣೆ ಆಗಿ ಹೋಗುತ್ತಿದ್ದಾರೆ. ಇದರಿಂದ ಮತ್ತಷ್ಟು ಶಿಕ್ಷಕರ ಕೊರತೆ ಕಾಡುವಂತೆ ಆಗುತ್ತದೆ. ಹೀಗಾಗಿ ಸ್ಥಳೀಯ ಶಿಕ್ಷಕರಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಮಕ್ಕಳ ಹಾಜರಾತಿ ಸಮಸ್ಯೆ ಇದೆ. ಒಬ್ಬ ಮಗು ಒಂದು ದಿನ ಶಾಲೆಗೆ ಬಂದರೆ, ಮತ್ತೂಂದು ದಿನ ಬರಲ್ಲ. ಹೀಗಾಗಿ ಪ್ರತಿ ವರ್ಷ ಕನಿಷ್ಠ 10ರಷ್ಟು ಹಾಜರಾತಿ ಕೊರತೆಯಾಗುತ್ತಿದೆ. ಪಾಠ ಬೋಧನೆಯಲ್ಲಿ ಶಿಕ್ಷಕರ ನಿರ್ಲಕ್ಷ್ಯವೂ ಕಾಣುತ್ತಿದೆ. ಅವರು, ಪಾಠ ಹೇಳುವುದು ಬರೀ ಒಂದು ಕ್ರಿಯೆ ಎಂದು ತಿಳಿದುಕೊಂಡಿದ್ದಾರೆ.

ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆ ಆಗಿದೆ. ಪಠ್ಯವನ್ನು ಅರ್ಥೈಸಿ ಶಿಕ್ಷಕರು ಪಾಠ ಮಾಡಬೇಕು. ಜತೆಗೆ ಈ ಭಾಗದಲ್ಲಿ ಉರ್ದು, ಮರಾಠಿ, ತೆಲುಗು ಬಹುಭಾಷೆ ಇರುವುದರಿಂದ ಫಲಿತಾಂಶಕ್ಕೆ ಪೆಟ್ಟು ಬೀಳುತ್ತಿದೆ ಎಂದು ಹೇಳಿದರು.

Advertisement

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳ (ಡಯಟ್‌) ಕಾರ್ಯ ಶೈಲಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಕ ತರಬೇತಿ ಮತ್ತು ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕ ಇರುವಂತೆ ನೋಡಿಕೊಳ್ಳಲಾಗುವುದು.

ಈ ಸಂಬಂಧ ಶೀಘ್ರವೇ ಸಭೆ ನಡೆಸಲಾಗುವುದು. ಅಲ್ಲದೇ, ಪ್ರಸ್ತಕ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಕೇವಲ ನಾಲ್ಕು ತಿಂಗಳಿದೆ. ಇಷ್ಟರಲ್ಲಿ ಆದಷ್ಟು ಸುಧಾರಣೆಗೆ ಕ್ರಮ ವಹಿಸಲಾಗುವುದು. ಜತೆಗೆ ಈ ಭಾಗದಲ್ಲಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಕಲಬುರಗಿ ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನಿ ಅತುಲ್‌ ಮತ್ತು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಕಾಳಜಿ ಹೊಂದಿದ್ದಾರೆ. ಈಗಿನಿಂದಲೇ ಮುಂದಿನ ವರ್ಷದ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತಹ ವ್ಯವಸ್ಥೆ ರೂಪಿಸಲಾಗುವುದು ಎಂದರು. ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನ ಅತುಲ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ ನಮೋಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next