ಕಲಬುರಗಿ: ಕೆಲಸಕ್ಕಾಗಿ ಏಜೆಂಟ್ ಮೂಲಕ ರಷ್ಯಾಗೆ ತೆರಳಿದ್ದ ಕಲಬುರಗಿಯ ನಾಲ್ಕು ಯುವಕರು ಯುದ್ಧಕಾರ್ಯದಲ್ಲಿ ಸಿಲುಕಿದ್ದಾರೆ. 2023ರ ಡಿಸೆಂಬರ್ 5 ರಂದು ರಷ್ಯಾಕ್ಕೆ ತೆರಳಿದ್ದು, ಅಲ್ಲಿ ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಸೇನೆಗೆ ಸೇರ್ಪಡೆಗೊಳಿಸಿದ್ದು, ಅಲ್ಲಿ ತೊಂದರೆಯಾಗುತ್ತಿದೆ ಎಂದು ಯುವಕರೆ ವಿಡಿಯೋ ಮಾಡಿ ಕುಂಬದ ಸದಸ್ಯರಿಗೆ ಕಳಿಸಿದ್ದಾರೆ.
ಈ ವಿಷಯವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಖಚಿತ ಪಡಿಸಿದ್ದಾರೆ. ಹೆಡ್ ಕಾನಸ್ಟೇಬಲ್ ಸೈಯದ್ ನವಾಜ ಅಲಿ ಪುತ್ರ ಸೈಯದ್ ಇಲಿಯಾಸ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ನೌಕರಿ ಆಸೆಗಾಗಿ ಊರು ಬಿಟ್ಟರು: ನೌಕರಿ ಆಸೆಗಾಗಿ ಊರು ಬಿಟ್ಟ ಈ ನಾಲ್ವರು ಯುವಕರು ಮುಂಬೈ ಮೂಲದ ಬಾಬಾಖಾನ್ ಎನ್ನುವ ಏಜೆಂಟ್ ಮೂಲಕ ರಷ್ಯಾ ಗೆ ತೆರಳಿದ್ದಾರೆ. ಅದಕ್ಕಾಗಿ ಮೂರು ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಆದರೆ, ಕೆಲಸ ಸಿಗುವ ಆಸೆಯಲ್ಲಿ ರಷ್ಯಾಗೆ ಹೋದ ಯುವಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದಕ್ಕೂ ಮುನ್ನ ಈ ಯುವಕರು ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಬಾಬಾ ಬ್ಲಾಗ್ ನಲ್ಲಿ ಜಾಹೀರಾತು ನೋಡಿ ರಷ್ಯಾಗೆ ಹೋಗಿದ್ದರು. ಸೆಕ್ಯುರಿಟಿ ನೌಕರಿಗೆ ಹೋದವರನ್ನು ಉಕ್ರೇನ್ ವಿರುದ್ಧದ ಯುದ್ದಕ್ಕಾಗಿ ಸೇನೆಯಲ್ಲಿ ಸೇರಿಸಲಾಗಿದೆ.
ಕಲಬುರಗಿಯ ಆಳಂದ ತಾಲೂಕಿನ ನರೋಣದ ಮತ್ತು ಕಾಳಗಿ ಮೂಲದವರು ಎನ್ನಲಾಗಿರುವ ಈ ಯುವಕರು ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಅಲ್ಲಿ ತೊಂದರೆಯಾಗಿದ್ದು, ಅದನ್ನು ವಿಡಿಯೋ ಮುಖಾಂತರ ಪಾಲಕರಿಗೆ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿರುವ ಹುಡುಗನ ತಂದೆ ನವಾಜ್ ಕಾಳಗಿ, ನನ್ನ ಮಗನಿಗೆ ಏಜೆಂಟ್ಗಳು ಮೋಸ ಮಾಡಿದ್ದಾರೆ. ಅವನು ಸಮಸ್ಯೆಯಲ್ಲಿದ್ದಾನೆ. ನನ್ನ ಮಕ್ಕಳಿಗೆ ಮೋಸವಾಗಿದೆ. ಭಾರತದ ಅನೇಕ ಜನರಿಗೆ ಮೋಸವಾಗಿದೆ ಎಂದು ಕಣ್ಣೀರು ಹಾಕಿದ್ದಲ್ಲದೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಕ್ಷಣೆ ಮಾಡುವಂತೆ ಕೋರಿದ್ದಾರೆ.
ಉಕ್ರೇನ್ ಗಡಿಯಲ್ಲಿ ಯುದ್ದದಲ್ಲಿ ನಿಯೋಜನೆ ಮಾಡಿದ್ದಾರೆ. ತರಬೇತಿ ನಡೆದಿದೆ ಎಂದು ಹೇಳಿ ಬಾರ್ಡರ್ ನಲ್ಲಿ ನಿಯೋಜನೆ ಮಾಡಿದ್ದಾರೆ. ಮತ್ತೊಬ್ಬ ಯುವಕನನ್ನು ಎಲ್ಲಿ ಹಾಕಿದ್ದಾರೆಂದು ಇದುವರೆಗೂ ಗೊತ್ತಾಗಿಲ್ಲ ಎಂದು ಯುವಕನ ತಂದೆ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸರ್ಕಾರ ಮಧ್ಯೆ ಪ್ರವೇಶಿಸಿ ಯುವಕರನ್ನು ತವರಿಗೆ ಕರೆತರಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರವಷ್ಟೇ ನನಗೆ ಕಲಬುರಗಿಯ ಕೆಲ ಯುವಕರು ಉದ್ಯೋಗಕ್ಕೆ ಹೋಗಿ ರಷ್ಯಾದ ಗಡಿಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ದೊರಕಿದೆ. ಒಬ್ಬ ಯುವಕ ಕಾಳಗಿ ಮತ್ತು ಇನ್ನೊಬ್ಬ ಆಳಂದ ನರೋಣ ಗ್ರಾಮದವರು ಎಂದು ಗೊತ್ತಾಗಿದೆ. ಸಿಲುಕಿರುವ ಯುವಕರ ಪೋಷಕರು ಅವರ ಪಾಸ್‌ಪೋರ್ಟ್ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡಿದ್ದಾರೆ. ಈಗಗಾಲೇ ಸಂಬಂಧಪಟ್ಟ ಇಲಾಖೆ ಮಾಹಿತಿ ಕಳುಹಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹೇಳಿದ್ದಾರೆ.