ಕಲಬುರಗಿ: ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಇಲ್ಲದೇ ಜೀವನ ಸಾಗಿಸುವುದು ಸಾಧ್ಯವೇ ಇಲ್ಲ ಎನ್ನುವಂತೆ ಆಗಿದೆ. ಆದರೆ, ನಾವು ಬಳಸುವ ಆನ್‌ಲೈನ್ ಡಾಟಾದಿಂದ ಕೂಡಿದ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್‌ಗಳು ಬಹುತೇಕ ಸುರಕ್ಷಿತವಾಗಿಲ್ಲ. ಆದ್ದರಿಂದ ಸೈಬರ್ ಕ್ರೈಂಗೆ ಬಲಿಪಶು ಆಗುವುದರಿಂದ ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ, ಪೊಲೀಸ್ ಮಹಾ ನಿರ್ದೇಶಕ (ಕಂಪ್ಯೂಟರ್ ವಿಭಾಗ) ಸಂಜಯ ಸಹಾಯ್ ಹೇಳಿದರು.
ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶನಿವಾರ ಸೈಬರ್ ಸೆಕ್ಯೂರಿಟಿ, ಫೋರೆನ್ಸಿಕ್ ಸರ್ಟಿಫಿಕೇಟ್ ಕೋರ್ಸ್ ಆರಂಭ ಸಮಾರಂಭ, ಸೈಬರ್ ಸೆಕ್ಯೂರಿಟಿ ಮತ್ತು ಫೋರೆನ್ಸಿಕ್ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನವನ್ನು ಶಿಕ್ಷಕರು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಅದರ ಹೆಚ್ಚಿನ ಲಾಭ ಪಡೆಯುತ್ತಿರುವವರು ಕ್ರಿಮಿನಲ್ಗಳು. ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಮಾಫಿಯಾ, ಭಯೋತ್ಪಾದನೆ, ಕಳ್ಳಸಾಗಾಟಕ್ಕೆ ತಂತ್ರಜ್ಞಾನ ಬಳಕೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಒತ್ತೆಯಾಳು ರೀತಿಯಲ್ಲೂ ಬಳಸಿಕೊಳ್ಳಲಾಗುತ್ತಿದೆ ಎಂದರು.
ಅಮೆರಿಕಾದಲ್ಲಿ 40 ಪಾಲಿಕೆ ಸಂಸ್ಥೆಗಳ ಮೇಲೆ ರಾನ್ಸಮ್‌ವೇರ್ ಹೆಸರಲ್ಲಿ ಸೈಬರ್ ದಾಳಿ ಆಗಿತ್ತು. ಹ್ಯಾಕ್ ಮಾಡಿ ಬಿಡುಗಡೆಗೊಳಿಸಲು ಕೆಲ ಬೇಡಿಕೆ ಇಟ್ಟಿರುವ ಪ್ರಸಂಗಗಳು ನಡೆಯುತ್ತಿವೆ. ಅಲ್ಲದೇ, ಸೋನಿ ಕಂಪನಿ ಮಾಹಿತಿಗೂ ಕನ್ನ ಹಾಕಲಾಗಿತ್ತು. ಅಂದಾಜಿನ ಪ್ರಕಾರ ವರ್ಷಕ್ಕೆ 1.5 ಟ್ರಿಲಿಯನ್ ಡಾಲರ್ ಮೊತ್ತ ಸೈಬರ್ ಕ್ರೈಂಗೆ ಒಳಗಾಗುತ್ತದೆ. ಹೀಗಾಗಿ ಸೈಬರ್ ಕ್ರೈಂನಿಂದ ಪಾರಾಗಲು ಅನೇಕ ರಾಷ್ಟ್ರಗಳು ನಿತ್ಯ ಪ್ರಯತ್ನಿಸುತ್ತಿವೆ. ಅಮೆರಿಕಾ ರಾಷ್ಟ್ರೀಯ ಏಜೆನ್ಸಿಯಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದರು.
ಚಾರಿತ್ರ್ಯತೆ ನಿರ್ಧರಿಸುವ ಪ್ರೊಫೈಲ್: ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಮತ್ತಿತರ ಅಕೌಂಟ್‌ಗಳ ಪ್ರೊಫೈಲ್ಗಳೇ ಮನುಷ್ಯನ ಚಾರಿತ್ರ್ಯತೆ ಅಳೆಯುವಂತೆ ಆಗಿದೆ. ಉದ್ಯೋಗದಾತರು ನಿಮ್ಮ ಪ್ರೊಫೈಲ್ ನೋಡಿಯೇ ಕೆಲಸಕ್ಕೆ ಅರ್ಹನೋ? ಇಲ್ಲವೋ? ಎಂದು ನಿರ್ಧರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಬೆಂಗಳೂರಿನ ಫ್ಲೆಕ್ಸಿಟ್ರಾನ್ ಸಂಸ್ಥೆಯ ಸಿಇಒ ಆರ್.ಎಸ್. ಹಿರೇಮಠ, ಎಚ್ಕೆಇ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಮಾತನಾಡಿದರು.
ಸಂಸ್ಥೆ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಪದಾಧಿಕಾರಿಗಳಾದ ಡಾ| ಸಂಪತ್‌ಕುಮಾರ ಲೋಯಾ, ವಿಜಯಕುಮಾರ ದೇಶಮುಖ, ಉದಯಕುಮಾರ ಚಿಂಚೋಳಿ, ಸತೀಶ್ಚಂದ್ರ ಹಡಗಲಿಮಠ, ಪ್ರಾಂಶುಪಾಲ ಡಾ| ಎಸ್.ಎಸ್. ಹೆಬ್ಟಾಳ, ಡಾ| ಸಿ.ಆರ್. ಪಾಟೀಲ, ಡಾ| ಭಾರತಿ ಹರಸೂರ, ಡಾ| ಸುಜತಾ ತೆರದಾಳ, ಡಾ| ಶ್ರೀದೇವಿ ಸೋಮ, ಬಾಬುರಾವ್ ಶೇರಿಕಾರ್ ಹಾಗೂ ಮಹಾ ವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.