Advertisement

ಮುಸ್ಲಿಂಮರ “ಪೌರತ್ವಕ್ಕೆ ಧಕ್ಕೆಯಿಲ್ಲ

05:41 PM Dec 29, 2019 | |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ್‌ ಹೇಳಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ (ಕಲಬುಗರಿ, ಯಾದಗಿರಿ, ಬೀದರ) ಕಾರ್ಯಾಗಾರ ಮತ್ತು ಪೌರತ್ವ ಕಾಯ್ದೆ ಬಗ್ಗೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಶೋಷಣೆಗೊಳಾಗದ ಹಿಂದೂ, ಜೈನ್‌, ಕ್ರೈಸ್ತ, ಬುದ್ಧ ಸೇರಿದಂತೆ ಆರು ಧರ್ಮದವರಿಗೆ ಪೌರತ್ವ ಕಾಯ್ದೆ ನೀಡಲಿದೆ. ಅದರ ಹೊರತು ಭಾರತದಲ್ಲಿರುವ ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಆದರೆ, ದೇಶದ ಮುಸ್ಲಿಮರನ್ನು ಕಾಂಗ್ರೆಸ್‌ ಪಕ್ಷ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ಹರಿಹಾಯ್ದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾತ್ರ ಭಾರತ ದೇಶ ಬದಲಾವಣೆ ಕಾಣಲು ಸಾಧ್ಯ. ಭಾರತ ಮತ್ತು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಆಯಾ ದೇಶಗಳ ಹೊಣೆ. ಈ ಸಂಬಂಧ ನೆಹರೂ, ಲಿಯಾಕತ್‌ ಅಲಿ ಒಪ್ಪಂದವಾಗಿದೆ. ಭಾರತ ತನ್ನಲ್ಲಿನ ಅಲ್ಪಸಂಖ್ಯಾತ ನಾಗರಿಕರಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದೆ. ಸಂವಿಧಾನದ ಹನ್ನೊಂದು ಕಾಯ್ದೆಗಳಲ್ಲಿ ಇಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಾಗಿದೆ. ಆದರೆ, ಪಾಕಿಸ್ತಾನ ತನ್ನಲ್ಲಿನ ಅಲ್ಪಸಂಖ್ಯಾತ ನಾಗರಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದು ಆಯಾ ದೇಶದ ಜವಾಬ್ದಾರಿ ಎಂದು ವಿಶ್ವಸಂಸ್ಥೆ ನಿಯಮ ಮಾಡಿದೆ. ಈ ನಿಯಮವನ್ನು ಪಾಕಿಸ್ತಾನ ಉಲ್ಲಂಘನೆ
ಮಾಡುತ್ತಿದೆ. ಆದ್ದರಿಂದ ಪಾಕಿಸ್ತಾನದಲ್ಲಿ ಶೇ.13ರಷ್ಟಿದ್ದ ಅಲ್ಪಸಂಖ್ಯಾತರ ಜನಸಂಖ್ಯೆ ಬರೀ ಒಂದಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಶೋಷಣೆಗೆ ಒಳಗಾದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ವಾಲ್ಮೀಕಿ ಸಮುದಾಯದವರು ಅಧಿಕವಾಗಿದ್ದಾರೆ.

Advertisement

ಮೋದಿ ಸರ್ಕಾರದ ತಿದ್ದುಪಡಿ ಕಾಯ್ದೆಯಿಂದ ಅವರಿಗೆಲ್ಲ ಅನುಕೂಲವಾಗಲಿದೆ. ಇದೊಂದು ಮಾನವೀಯತೆಯಿಂದ ಕೂಡಿದ ಕಾಯ್ದೆಯಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್‌-ದೀದಿ ವಿರುದ್ಧ ಕಿಡಿ: ಪೌರತ್ವ ಕಾಯ್ದೆ ವಿಷಯದಲ್ಲಿ ಮುಸ್ಲಿಮರನ್ನು ಕಾಂಗ್ರೆಸ್‌ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದೆ. ದೇಶದಲ್ಲಿ ವಿನಾ ಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ಪ್ರತಿಭಟನೆಗಳಿಗೆ ಜನತೆಯನ್ನು ಇಳಿಸುವ ಮುನ್ನ ಕಾಂಗ್ರೆಸ್‌ನವರು ಮತ್ತು ಬುದ್ಧಿ ಜೀವಿಗಳು ಕಾಯ್ದೆಯನ್ನು ಓದಲಿ. ಜನತೆಯನ್ನು ತಪ್ಪುದಾರಿಗೆ ಎಳೆಯುವುದನ್ನು ಬಿಡಲಿ ಎಂದು ಹೇಳಿದರು.

ಕಾಂಗ್ರೆಸ್‌, ಪ್ರತಿಪಕ್ಷಗಳ ಪ್ರಚೋದನೆಯಿಂದ ದೇಶಾದ್ಯಂತ ಬರೀ ನಾಲ್ಕೈದು ಲಕ್ಷ ಜನರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ದೇಶದ ನೂರು ಕೋಟಿ ಜನರು ಪೌರತ್ವ ಕಾಯ್ದೆ ಪರವಾಗಿದ್ದಾರೆ. ಕಾಯ್ದೆ ವಿರೋಧಿಸಿ ಗಲಭೆ ಸೃಷ್ಟಿಸಿ ಆಸ್ತಿ-ಪಾಸ್ತಿ ಹಾನಿ ಮಾಡುವುದು ಸರಿಯಲ್ಲ.

ಮಂಗಳೂರು ಗಲಭೆಯಲ್ಲಿ ಮೃತರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಹಾರ ನೀಡಿದ್ದು, ಹಾಸ್ಯಾಸ್ಪದವಾಗಿದೆ. ಮಮತಾ ಅಕ್ಕ ಕಲ್ಲು ಹೊಡೆಯುವವರು, ಬೆಂಕಿ ಹಚ್ಚುವರನ್ನು ಮಾತ್ರ ನೋಡಬೇಡಿ. ದೇಶದ ಗಡಿಯಲ್ಲಿ ಮೃತಪಡುವ ಹಾಗೂ ಪ್ರವಾಹ ಸಂತ್ರಸ್ತರು ನಿಮಗೆ ಕಾಣಲಿಲ್ಲವೇ? ಪಶ್ಚಿಮ ಬಂಗಾಳದಲ್ಲಿ ಬೀದಿ ಬದಿಯ ಜನರನ್ನು ಮೊದಲು ನೋಡಿ ಎಂದು ಕುಟುಕಿದರು.

ದೇಶಕ್ಕಾಗಿ ನಡಿಗೆ: ಪೌರತ್ವ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳ ಕುತಂತ್ರ ಬಯಲಿಗೆ ಎಳೆಯಲು ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು. ಚುನಾವಣೆ ಸಮಯದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ಮಾಡಿದಂತೆ ಈಗ ಕ್ರಿಯಾಶೀಲರಾಗಬೇಕು. ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸಲು ದೇಶಕ್ಕಾಗಿ ನಡಿಗೆ ಆರಂಭಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಮೊದಲ ದಿನ ಪ್ರತಿ ಬೂತ್‌ ಮಟ್ಟದಲ್ಲಿ ಕಾರ್ಯಾಗಾರ ನಡೆಸಬೇಕು. ಅದೇ ಕಾಯ್ದೆ ಪರವಾದ ಭಿತ್ತಿ ಫಲಕಗಳನ್ನು ಹಿಡಿದು ಬೈಕ್‌ ರ್ಯಾಲಿ ಅಥವಾ ನೂರು ಮೀಟರ್‌ ಪಾದಯಾತ್ರೆ ನಡೆಸಬೇಕು. ಎರಡನೇ ದಿನ ಬೂತ್‌ನ ಪ್ರತಿ ಮನೆಗೆ ಕಾರ್ಯಕರ್ತರು ತೆರಳಿ ಅರಿವು ಮೂಡಿಸಬೇಕು. ಪೌರತ್ವ ಕಾಯ್ದೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಜನರಿಂದಲೇ ಅಭಿನಂದನಾ ಪತ್ರಗಳನ್ನು ಬರೆಸಬೇಕೆಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಶಾಸಕರಾದ ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಮಾಜಿ ವಿಧಾನಪರಿಷತ್‌ ಸದಸ್ಯ ಶಶೀಲ ನಮೋಶಿ ಹಾಗೂ ಕಲಬುರಗಿ, ಯಾದಗಿರಿ, ಬೀದರ ಜಿಲ್ಲೆಗಳು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ಮೋದಿ ಸರ್ಕಾರ ಜಾರಿಗೆ ತಂದ ಪೌರತ್ವ ಕಾಯ್ದೆ ಜನರಲ್ಲಿ ಜಾಗೃತಿ
ಮೂಡಿಸುವ ಉದ್ದೇಶದಿಂದ 58 ಸಾವಿರ ಸಂಪರ್ಕ ಸಭೆಗಳನ್ನು ನಡೆಸಲಾಗುವುದು. ಮೋದಿಗೆ ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಠ ಒಂದು ಲಕ್ಷ ಅಭಿನಂದನಾ ಪತ್ರಗಳನ್ನು ಕಳುಹಿಸಲಾಗುವುದು. ವಾಕ್‌ಥಾನ್‌, ಮ್ಯಾರಾಥಾನ್‌, ಚಾಯ್‌ ಪೇ ಚರ್ಚಾದಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಿಳಿವಳಿಕೆ ಮೂಡಿಸಲಾಗುವುದು.
ಪಿ.ರಾಜೀವ್‌, ಶಾಸಕರು, ಕುಡಚಿ

Advertisement

Udayavani is now on Telegram. Click here to join our channel and stay updated with the latest news.

Next