ಕಲಬುರಗಿ: ಲಾಕ್‌ಡೌನ್‌ನಲ್ಲಿ ಸಿಲುಕಿರುವ ನಾಗರಿಕರು ತಮ್ಮ ಊರು ಮತ್ತು ಕಾರ್ಯ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸಕ್ಕೆ ಅನುಮತಿ ಪತ್ರ ನೀಡುತ್ತಾರೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಜೆ ದಿನವಾದ ರವಿವಾರವೂ ಸಾಕಷ್ಟು ಜನರು ಸೇರಿದ್ದರು.
ಸರ್ಕಾರ ಅಂತರ್ ಜಿಲ್ಲಾ ಮತ್ತು ಅಂತಾರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಜಿಲ್ಲೆಯಿಂದ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಕೈಗೊಳ್ಳಬೇಕಾದರೆ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಗುರುತಿನ ಚೀಟಿ ಒದಗಿಸಿ, ನಿರ್ದಿಷ್ಟ ಕಾರಣ ನೀಡಿದವರಿಗೆ ಮಾತ್ರ ಪ್ರವಾಸದ ಅನುಮತಿ ಪತ್ರ ದೊರೆಯಲಿದೆ. ಇದನ್ನರಿತ ಹಲವರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಲಗ್ಗೆ ಇಟ್ಟಿದ್ದರು. ರವಿವಾರ ರಜೆ ದಿನವಾಗಿದ್ದರಿಂದ ಯಾವುದೇ ಅಧಿಕಾರಿಗಳು ಬಂದಿರಲಿಲ್ಲ. ವಲಸೆ ಕಾರ್ಮಿಕರು ಮಾತ್ರವಲ್ಲದೇ ಬೆಂಗಳೂರು, ಬೆಳಗಾವಿ, ಬಳ್ಳಾರಿ, ಪುಣೆ ಮುಂತಾದ ಕಡೆಗಳಿಗೆ ಸಂಚರಿಸಲು ಅನುಮತಿ ಕೋರಲು ಬಂದಿದ್ದರು. ಕಚೇರಿ ಕಾವಲುಗಾರರನ್ನು ವಿಚಾರಿದಾಗ “ಸಾಹೆಬ್ರು ಮಧ್ಯಾಹ್ನ 3 ಗಂಟೆಗೆ ಬರಲಿದ್ದಾರೆ’ ಎಂದಷ್ಟೇ ಹೇಳಿದರು. ಹೀಗಾಗಿ ಹಲವರು ಅಧಿಕಾರಿಗಳ ದಾರಿ ಕಾಯುತ್ತಾ ಅಲ್ಲೇ ಕುಳಿತ್ತಿದ್ದರೆ, ಮತ್ತೆ ಕೆಲವರು ನಿರಾಸೆಯಿಂದ ಮರಳುತ್ತಿರುವ ದೃಶ್ಯ ಕಂಡು ಬಂತು.
“ಮಹಾರಾಷ್ಟ್ರದ ಪುಣೆಯಲ್ಲಿ ಭವಿಷ್ಯ ಹೇಳುವ ಕಾಯಕ ಮಾಡುತ್ತಿದ್ದು, ಕುಟುಂಬ ಸಮೇತವಾಗಿ ಅಲ್ಲೇ ವಾಸುತ್ತಿದ್ದೇವೆ. ಮಾ.16ರಂದು ಕೆಲಸದ ನಿಮಿತ್ತ ನಾನು ಸೇರಿ ಆರು ಜನರು ಸ್ವಗ್ರಾಮಕ್ಕೆ ಬಂದಿದ್ದೇವೆ. ಲಾಕ್‌ಡೌನ್ ಜಾರಿಯಾದ ಪರಿಣಾಮ ಪುಣೆಗೆ ಹೋಗಲು ಆಗಲಿಲ್ಲ. ಅಲ್ಲಿ ಪತ್ನಿ, ಮಕ್ಕಳು ಸಿಲುಕಿದ್ದಾರೆ. ಇದರಿಂದ ಆತಂಕ ಮನೆ ಮಾಡಿದೆ’ ಎಂದು ತಾಲೂಕಿನ ಬೋಳವಾಡಿ ಗ್ರಾಮದ ಮನೋಜ್ ಜೋಷಿ, ಸುಂದರ ಜೋಷಿ ಅಳಲು ತೋಡಿಕೊಂಡರು. ಎಡಿಸಿಗೆ ಜವಾಬ್ದಾರಿ: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹೋಗುವವರಿಗೆ ಜಿಲ್ಲಾಡಳಿತದಿಂದ ಅನುಪತಿ ಪತ್ರ ನೀಡಲಾಗುತ್ತದೆ. ಅನುಮತಿ ಮತ್ರ ನೀಡಲು ಅಪಾರ ಜಿಲ್ಲಾಧಿಕಾರಿಗೆ ಜವಾಬ್ದಾರಿ ವಹಿಸಲಾಗಿದೆ.
ನಿಖರ ದಾಖಲೆ ಪರಿಶೀಲಿಸಿ ಪಾಸ್ ನೀಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಶರತ್ ಬಿ. ಜಿಲ್ಲೆಯಲ್ಲಿ ಹೊರ ರಾಜ್ಯಗಳ 141 ವಲಸೆ ಕಾರ್ಮಿಕರು ಜಿಲ್ಲಾಡಳಿತ ಆಶ್ರಯದಲ್ಲಿ ಇದ್ದಾರೆ. ಹೊರ ರಾಜ್ಯಗಳ ಪ್ರವಾಸ ಸಂಬಂಧ ಸರ್ಕಾರ ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಹೊರ ಹೋಗುವರ ಪಟ್ಟಿಯನ್ನು ನೋಡಲ್ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅವರ ಮಾರ್ಗಸೂಚಿಯಂತೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೇಡಿಕೆ ಅನುಸಾರ ಬಸ್: ಕೊರೊನಾ ಭೀತಿ ಹಿನ್ನೆಲೆಯಲ್ಲಿ ರೆಡ್ ಝೋನ್, ಆರೇಂಜ್ ಝೋನ್‌ನಲ್ಲಿ ಜಿಲ್ಲಾಡಳಿತ ಆದೇಶ ಅನುಸಾರ ಬಸ್ ಸಂಚಾರ ನಡೆಯಲಿದೆ. ಕಲಬುರಗಿ ಆರೆಂಜ್ ಝೋನ್‌ನಲ್ಲಿದ್ದು, ಹೊರ ಜಿಲ್ಲೆಗಳಿಗೆ ಹೋಗುವವರ ಪಟ್ಟಿ ನೀಡಿದಾಗ ಮಾತ್ರ ಬಸ್ ಒದಗಿಸಲಾಗುತ್ತದೆ ಎಂದು ಹೇಳುತ್ತಾರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀನ್.