ಕಲಬುರಗಿ: ಉದ್ಯಾನವನದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಎನ್.ಜಿ.ಒ. ಕಾಲೋನಿಯಲ್ಲಿ ಬುಧವಾರ(ಸೆ.29) ಮಧ್ಯಾಹ್ನ ನಡೆದಿದೆ.
7 ವರ್ಷದ ಸಿದ್ದು ಎಂಬ ಬಾಲಕನೇ ಮೃತ ದುರ್ದೈವಿ. ಇಲ್ಲಿನ ಹನುಮಾನ ಮಂದಿರ ಸಮೀಪದ ಉದ್ಯಾನವನದಲ್ಲಿ ಅವಘಡ ನಡೆದಿದೆ.
ಉದ್ಯಾನವನದಲ್ಲಿ ನಿತ್ಯವೂ ಬಡಾವಣೆಯ ಮಕ್ಕಳು ಒಟ್ಟಾಗಿ ಆಟವಾಡುತ್ತಿದ್ದರು. ಎಂದಿನಂತೆ ಇಂದು ಕೂಡ ಆಟವಾಗುತ್ತಿದ್ದಾಗ ಉದ್ಯಾನವನದಲ್ಲಿರುವ ವಿದ್ಯುತ್ ಕಂಬದ ಬಳಿ ವಿದ್ಯುತ್ ಪ್ರವಹಿಸಿದೆ. ಕಂಬದ ಸಮೀಪವೇ ವಿದ್ಯುತ್ ಮೀಟರ್ ಬಾಕ್ಸ್ ಅನ್ನು ಕಬ್ಬಿಣದ ರಾಡ್ ನೆಟ್ಟು ಸ್ಥಾಪಿಸಲಾಗಿದ್ದು, ಮಳೆಗೆ ಒದ್ದೆಯಾಗಿ ಅದರಿಂದ ವಿದ್ಯುತ್ ಪ್ರವಹಿಸಿರುವ ಶಂಕೆ ವ್ಯಕ್ತವಾಗಿದೆ.
ಮೃತ ಬಾಲಕನ ತಂದೆ ಸುರೇಶ ಮತ್ತು ತಾಯಿ ಮಹಾದೇವಿ ಇಬ್ಬರೂ ಕೂಲಿ ಕಾರ್ಮಿಕರು. ಉದ್ಯಾನವನದಲ್ಲಿ ವಿದ್ಯುತ್ ಕಂಬ ಸುತ್ತ ಹಲವು ದಿನಗಳಿಂದ ತಂತಿಗಳು ನೆಲದಲ್ಲೇ ಬಿದ್ದಿವೆ ಮತ್ತು ಮೀಟರ್ ಬ್ಯಾಕ್ಸ್ ಕೂಡ ಒಡೆದು ಹೋಗಿದೆ. ಆದರೂ, ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಈ ಘಟನೆ ಜೆಸ್ಕಾಂನವರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಂ.ಬಿ.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.