Advertisement

ಇಂದಿನಿಂದ ಕಲಬುರಗಿ-ತಿರುಪತಿ ನೇರ ವಿಮಾನ

01:40 PM Jan 11, 2021 | Team Udayavani |

ಕಲಬುರಗಿ: ಶರಣರ ನಾಡು ಕಲಬುರಗಿ ಮತ್ತು ಜಗತ್ತಿನ ಶ್ರೀಮಂತ ದೇವರು ತಿಮ್ಮಪ್ಪನ ಸನ್ನಿಧಾನ ತಿರುಪತಿ ಇನ್ನು ಹತ್ತಿರವಾಗಲಿದೆ. ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆ ಜ.11ರಿಂದ ಕಲಬುರಗಿ ಹಾಗೂ ತಿರುಪತಿ ನಡುವೆ ವಿಮಾನ ಸೇವೆ ಆರಂಭಿಸಲಿದೆ. ವಾರದಲ್ಲಿ ನಾಲ್ಕು ದಿನ ವಿಮಾನ ಹಾರಾಟ ನಡೆಯಲಿದೆ.

Advertisement

ಉಡಾನ್‌ ಯೋಜನೆಯಡಿ ನೇರ ವಿಮಾನ ಹಾರಾಟ ನಡೆಸಲಿದ್ದು, ಬೆಳಗ್ಗೆ 9:55ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 11 ಗಂಟೆಗೆ
ತಿರುಪತಿ ವಿಮಾನ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2:25ಕ್ಕೆ ತಿರುಪತಿಯಿಂದ ವಿಮಾನ ಹೊರಟು 3:30ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

ಸೋಮವಾರ, ಗುರುವಾರ, ಶುಕ್ರವಾರ, ರವಿವಾರ ಈ ವಿಮಾನ ಸಂಚರಿಸಲಿದೆ. ಘೋಡವತ್‌ ಸಮೂಹ ಸಂಸ್ಥೆ ಒಡೆತನದ ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆ
ಕಲಬುರಗಿಯನ್ನು ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲು ವಿಶ್ವದರ್ಜೆ ವಿಮಾನ ಸೇವೆ ಒದಗಿಸುತ್ತಿದೆ. ಈಗಾಗಲೇ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿಗೆ ನೇರ ವಿಮಾನ ಸೇವೆ ಕಲ್ಪಿಸಲಿದೆ.

ಇದೀಗ ಪ್ರಯಾಣಿಕರ ಒತ್ತಾಸೆ ಮತ್ತು ಕಲಬುರಗಿ ಜನರ ಬಹುಬೇಡಿಕೆಯ ತಿರುಪತಿಗೆ ನೇರ ವಿಮಾನ  ಪ್ರಾರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ವ್ಯವಹಾರ ಮತ್ತು ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜ್‌ ಹೇಸಿ ರವಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲಬುರಗಿಯಿಂದ ಸಾವಿರಾರು ಜನ ಪ್ರವಾಸಿಗರು, ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ಹೋಗುತ್ತಾರೆ. 620 ಕಿ.ಮೀ ದೂರದ ತಿರುಪತಿಗೆ ಹೋಗಲು ರೈಲು, ರಸ್ತೆ ಸಂಚಾರಕ್ಕೆ 11 ಗಂಟೆ ಸಮಯ ಹಿಡಿಯುತ್ತದೆ. ಆದರೆ, ವಿಮಾನದಲ್ಲಿ ಕೇವಲ ಒಂದು ಗಂಟೆಯಲ್ಲೇ ತಿರುಪತಿ ತಲುಪಬಹುದು. ಪ್ರಯಾಣಿಕರಿಗೆ ಅನುಕೂಲಕರವಾದ ದರದಲ್ಲೇ ಟಿಕೆಟ್‌ ಬೆಲೆ ಇರುತ್ತದೆ. ಸಂಸ್ಥೆಯಿಂದ ಆರಂಭಿಕ ಕೊಡುಗೆಯಾಗಿ ಟಿಕೆಟ್‌ ದರ 999 ರೂ. ನಿಗದಿ ಪಡಿಸಲಾಗಿದೆ ಎಂದು ಹೇಳಿದರು.

Advertisement

ಕಲಬುರಗಿ-ತಿರುಪತಿ ನಡುವೆ 50 ಆಸನಗಳ ಸಾಮರ್ಥ್ಯದ ವಿಮಾನ ಹಾರಾಟ ನಡೆಸಲಾಗುವುದು. ನೇರ ವಿಮಾನ ಹಾರಾಟದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬೀದರ, ಯಾದಗಿರಿ, ರಾಯಚೂರು ಮತ್ತು ಪಕ್ಕದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಇದರ ಲಾಭ ಪಡೆಯಬಹುದಾಗಿದೆ. ಈಗಾಗಲೇ 38 ಜನರು ತಿರುಪತಿಗೆ ಟಿಕೆಟ್‌ ಕಾಯ್ದರಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಿಂದ ಸ್ಟಾರ್‌ ಏರ್‌ ವಿಮಾನ ಆರಂಭಿಸಿದ ದಿನದಿಂದಲೂ
ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬೆಂಗಳೂರು ಮತ್ತು ದೆಹಲಿ ವಿಮಾನಗಳಲ್ಲಿ 40ರಿಂದ 45 ಜನರು ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದರು.

ಘೋಡವತ್‌ ಸಮೂಹ ಸಂಸ್ಥೆ ಒಡೆತನದ ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆ ಬೆಳೆಯುತ್ತಿರುವ ನಗರಗಳನ್ನೇ ಹೆಚ್ಚು ಕೇಂದ್ರೀಕರಿಸಿ ವಿಮಾನ ಹಾರಾಟ ನಡೆಸುತ್ತಿದೆ. ದೇಶಾದ್ಯಂತ ಅಹ್ಮದಾಬಾದ್‌, ಅಜ್ಮೇರ್‌, ಬೆಳಗಾವಿ, ಬೆಂಗಳೂರು, ದೆಹಲಿ (ಹಿಂಡನ್‌), ಹುಬ್ಬಳ್ಳಿ, ಕಲಬುರಗಿ, ತಿರುಪತಿ, ಇಂಧೋರ್‌, ಮುಂಬೈ, ಸೂರತ್‌ ಸೇರಿ 11 ನಗರಗಳಲ್ಲಿ ಸೇವೆ ನೀಡುತ್ತಿದೆ. ಕಲಬುರಗಿ ಮತ್ತು ಮುಂಬೈ ನಡುವೆ ಪ್ರಯೋಗಿಕ ವಿಮಾನ ಹಾರಾಟ ನಡೆಸಲಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಕಲಬುರಗಿಯಿಂದ ಇನ್ನು ಕೆಲ ನಗರಗಳಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ಧವಿದೆ.
ರಾಜ್‌ ಹೇಸಿ, ಪ್ರಧಾನ ವ್ಯವಸ್ಥಾಪಕ, ವ್ಯವಹಾರ ಮತ್ತು
ಸಂವಹನ ವಿಭಾಗ, ಘೋಡವತ್‌ ಸಮೂಹ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next