ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನೇರವಾಗಿ ಹಂಚಿಕೆ ಮಾಡಿದ್ದ ಕೋಟ್ಯಂತರ ರೂ. ಮೌಲ್ಯದ ಮೂರು ವಾಣಿಜ್ಯ ನಿವೇಶನಗಳನ್ನು ಖಾಲಿ ಮಾಡಿಸಿ ಸರ್ಕಾರ ಮರು ವಶಕ್ಕೆ ಪಡೆದಿದೆ. ಈ ಮೂಲಕ ಸಾರ್ವಜನಿಕ ಆಸ್ತಿ ಸಂರಕ್ಷಣೆಯೊಂದಿಗೆ ನನ್ನ 14 ವರ್ಷಗಳ ಕಾನೂನು ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ ಎಂದು ಮಾಜಿ ಸಚಿವ, ಹಿರಿಯ ಹೋರಾಟಗಾರ ಎಸ್. ಕೆ. ಕಾಂತಾ ತಿಳಿಸಿದರು.
2006ರಲ್ಲಿ ವಿಶ್ವನಾಥ ನಾಡಗೌಡ ಎನ್ನುವವರಿಗೆ ಸರ್ವೇ ನಂ.145, 146, 147ರ ಅಡಿಯ ಮೂರು ನಿವೇಶನಗಳನ್ನು ಲೋಕೋಪಯೋಗಿ ಇಲಾಖೆ ಅನಧಿಕೃತವಾಗಿ ನೇರ ಹಂಚಿಕೆ ಮಾಡಿತ್ತು. ಇದನ್ನು ಸಾರ್ವಜನಿಕ ಹರಾಜಿನ ಮೂಲಕವೇ ಹಂಚಿಕೆ ಮಾಡಬೇಕಿತ್ತೇ ವಿನಃ ನೇರವಾಗಿ ಹಂಚಿಕೆ ಮಾಡಲು ಅವಕಾಶ ಇರಲಿಲ್ಲ. ಆದರೂ, ರಾಜಕೀಯ ಪ್ರಭಾವದಿಂದ ಮೂರು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ನೇರ ಹಂಚಿಕೆ ಪ್ರಶ್ನಿಸಿ 2007ರಲ್ಲಿ ಹೈಕೋಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2019ರ ಅಕ್ಟೋಬರ್‌ನಲ್ಲಿ ಹಂಚಿಕೆ ಅಸಿಂಧುಗೊಳಿಸಿ ತೆರವಿಗೆ ಆದೇಶಿಸಿತ್ತು. ಈ ನಡುವೆ ವಿಶ್ವನಾಥ ನಾಡಗೌಡ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ (ಸ್ಪೆಷಲ್ ಲೀವ್ ಅಪ್ಲಿಕೇಶನ್) ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಸರ್ವೋತ್ಛ ನ್ಯಾಯಾಲಯ ವಜಾಗೊಳಿಸಿತ್ತು. ಆದ್ದರಿಂದ ನೇರ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮರು ಸ್ವಾಧೀನ ಪಡಿಸಿಕೊಳ್ಳದೇ ಹೋದಲ್ಲಿ ನ್ಯಾಯಾಲಯದ ಮುಂದೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮನವರಿಕೆ ಆಗಿತ್ತು ಎಂದು ವಿವರಿಸಿದರು.
ಜಿಲ್ಲಾಧಿಕಾರಿಗೆ ಪತ್ರ: ನ್ಯಾಯಾಲಯದ ಆದೇಶ ಪಾಲನೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು 2020ರ ಸೆಪ್ಟೆಂಬರ್‌ನಲ್ಲಿ ಪತ್ರ ಬರೆದಿದ್ದರು. ನ್ಯಾಯಾಲಯದ ಆದೇಶ ಪಾಲನೆ ಸಂಬಂಧ ಸೂಪರ್ ಮಾರ್ಕೆಟ್ ಸಮಿತಿ ಅಧ್ಯಕ್ಷರಾದ ತಾವು (ಜಿಲ್ಲಾಧಿಕಾರಿಗಳು) ಸೂಕ್ತ ಬಂದೋಬಸ್ತ್ನೊಂದಿಗೆ ನಿವೇಶನಗಳನ್ನು ಹಿಂಪಡೆಯಲು ಸಹಕರಿಸಬೇಕೆಂದು ಪತ್ರ ಬರೆಯಲಾಗಿತ್ತು ಎಂದು ಎಸ್.ಕೆ. ಕಾಂತಾ ದಾಖಲೆ ಬಿಡುಗಡೆ ಮಾಡಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿವೇಶನಗಳ ತೆರವು ಮಾಡುವ ಸಂಬಂಧ ಹೈಕೋರ್ಟ್ ಆದೇಶ ಪಾಲನೆ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೂ, ಸುಪ್ರೀಂಕೋರ್ಟ್ ಮುಖ್ಯ ಕಾರ್ಯದರ್ಶಿಗಳ ಪ್ರಮಾಣ ಪತ್ರದಂತೆ ನಿವೇಶನಗಳನ್ನು ಮರಳಿ ಪಡೆಯಲಾಗಿದೆಯೋ ಅಥವಾ ಇಲ್ಲವೋ ಎನ್ನುವುದರ ಕುರಿತು ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿತ್ತು. ಆದ್ದರಿಂದ ನಿವೇಶನಗಳನ್ನು ಖಾಲಿ ಮಾಡುವಂತೆ ವಿಶ್ವನಾಥ ನಾಡಗೌಡ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಇಲ್ಲಿ ವರೆಗೆ ನಿವೇಶನಗಳನ್ನು ವಿಶ್ವನಾಥ ನಾಡಗೌಡ ಖಾಲಿ ಮಾಡಿರಲಿಲ್ಲ. ಹೀಗಾಗಿ ಈ ವಿಷಯ ತಂಬಾ ಗಂಭೀರತೆಯಿಂದ ಕೂಡಿದ್ದು, ವಿಶ್ವನಾಥ ನಾಡಗೌಡ ಅವರಿಂದ ನಿವೇಶನಗಳನ್ನು ಕೂಡಲೇ ಹಿಂಪಡೆಯಬೇಕು. ತಪ್ಪಿದರೆ ಲೋಕೋಪಯೋಗಿ ಇಲಾಖೆ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳು ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಡಿಸಿಗೆ ಬರೆದ ಪತ್ರದಲ್ಲಿ ಇಂಜಿನಿಯರ್ ಉಲ್ಲೇಖೀಸಿದ್ದರು ಎಂದು ವಿವರಿಸಿದರು.
ಇದೀಗ ಎಲ್ಲ ಮೂರು ನಿವೇಶನಗಳನ್ನು ಜಿಲ್ಲಾಡಳಿತ ಖಾಲಿ ಮಾಡಿಸಿ, ಈ ಆಸ್ತಿಯು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಸೇರಿದೆ ಎಂದು ಸರ್ಕಾರಿ ಬೋರ್ಡ್ ಅಳವಡಿಕೆ ಮಾಡಿದೆ ಎಂದು ಕಾಂತಾ ಸಂತಸ ವ್ಯಕ್ತಪಡಿಸಿದರು.