ಕಲಬುರಗಿ: ಇಡೀ ಶಿಕ್ಷಣ ವ್ಯವಸ್ಥೆ ನಾಶ ಮಾಡಿ ಖಾಸಗಿ ಹಿಡಿತಕ್ಕೆ ಒಳಪಡಿಸುವ ಹಿಡನ್ ಅಂಜೆಡಾವನ್ನು ನೂತನ ಶಿಕ್ಷಣ ನೀತಿ ಕರಡು ಹೊಂದಿದೆ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಉಪನ್ಯಾಸಕ ಪ್ರೊ| ಸುರ್ಜಿತ್ ಮಜುಮ್ದಾರ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾರತೀಯ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ ರಾಜ್ಯ ಅಧ್ಯಯನ ಶಿಬಿರದಲ್ಲಿ ರವಿವಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳ ಕುರಿತು ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿ ಬೌದ್ಧಿಕತೆಗೆ ಹೊಸ ಆಯಾಮ ಎಂಬ ಹೆಸರಲ್ಲಿ ಜನರನ್ನು ನಯವಾಗಿ ವಂಚಿಸುವ ಮತ್ತು ಒಡಕು ಮೂಡಿಸುವ ಹುನ್ನಾರ ಅಡಗಿದೆ ಎಂದು ದೂರಿದರು.
ಶಿಕ್ಷಣ ನೀತಿ ಕರಡುವಿನಲ್ಲಿ ಶಿಕ್ಷಣಕ್ಕಾಗಿ ಸಾರ್ವಜನಿಕ ವಲಯದ ಹಣ ಹೆಚ್ಚಿಸುವ ಬಗ್ಗೆ ಹೇಳಲಾಗಿದೆ. ಲಾಭದಾಯಕ ಸಂಸ್ಥೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಸೇರಿಸುವುದಿಲ್ಲ ಎಂದು ಹೇಳಲಾಗಿದೆ. ಇದೇ ವೇಳೆ ಲಾಭರಹಿತ ಖಾಸಗಿ ಸಂಸ್ಥೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಒಳ ಪಡಿಸಲಾಗುತ್ತಿದೆ ಎನ್ನಲಾಗಿದೆ. ವಾಸ್ತವ ಅಂಶವೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಸಾಕಷ್ಟು ಸಂಪತ್ತು ಮಾಡಿರುವ ಎಲ್ಲ ಸಂಸ್ಥೆಗಳು ಲಾಭರಹಿತ ಸಂಸ್ಥೆಗಳೆಂದೇ ಪರಿಗಣಿಸಲಾಗಿದೆ. ಹೀಗಾಗಿ ಇಡೀ ಶಿಕ್ಷಣವನ್ನು ಖಾಸಗಿಕರಣ ಮಾಡುವ ದುರುದ್ದೇಶವನ್ನು ಹೊಸ ಶಿಕ್ಷಣ ನೀತಿ ಕರಡು ಹೊಂದಿದೆ ಎಂದು ವಿಶ್ಲೇಷಿಸಿದರು.
ಪ್ರಾಥಮಿಕ ಶಾಲೆಯಲ್ಲಿ ಐದರಿಂದ ಹತ್ತು ವರ್ಷದ ಮಕ್ಕಳು ಹೆಚ್ಚಾಗಿರುತ್ತಾರೆ. ಉನ್ನತ ಶಿಕ್ಷಣಕ್ಕೆ ಬರುತ್ತಿದ್ದಂತೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. 1991ರಲ್ಲಿ ಶೇ.5ರಷ್ಟು ಮಾತ್ರ ಯುವ ಜನತೆ ಉನ್ನತ ಶಿಕ್ಷಣ ಪಡೆದಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳೆಲ್ಲ ಖಾಸಗಿಯವರದ್ದೇ ಆಗಿವೆ. ಇಂದಿನ ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಶೇ.45ರಷ್ಟು ಮಕ್ಕಳು, ಪದವಿ ಸಂಸ್ಥೆಗಳಿಗೆ ಶೇ.64ರಷ್ಟು ವಿದ್ಯಾರ್ಥಿಗಳು, ಶೇ.80ರಷ್ಟು ಎಂ.ಎ, ಪಿಎಚ್‌ಡಿ ಸ್ನಾತಕೋತ್ತರ ಪದವೀಧರರು ಹೋಗುತ್ತಿದ್ದಾರೆ. ಇದು ಶಿಕ್ಷಣ ಪಡೆಯುವವರ ಮೇಲಿನ ಹೊರೆ ಹೆಚ್ಚಿಸಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಸಾಕಷ್ಟು ಬದಲಾವಣೆಯಾಗಿದೆ. ಜನರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಂಬ ಪರಿಜ್ಞಾನ ಮೂಡುತ್ತಿದೆ. ಕೊಥಾರಿ ಸಮಿತಿ ಶಿಕ್ಷಣ ಕ್ಷೇತ್ರಕ್ಕೆ ದೇಶದ ಜಿಡಿಪಿಯ ಶೇ.6ರಷ್ಟು ಅನುದಾನ ನೀಡಬೇಕೆಂದು ಹೇಳಿದೆ. ದುರಂತವೆಂದರೆ ಶಿಕ್ಷಣಕ್ಕೆ ಅನುದಾನ ನೀಡಬೇಕೆಂಬ ಪರಿಜ್ಞಾನ ಸರ್ಕಾರಕ್ಕೆ ಬಂದಿಲ್ಲ. ಇದರಿಂದ ಜನರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಜೀವನ ನಿರ್ವಹಣೆಯನ್ನು ದುಸ್ತರ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಉನ್ನತ ಶಿಕ್ಷಣ ಸಂಬಂಧ ಹೊಸ ಶಿಕ್ಷಣ ನೀತಿ ಕರಡುವಿನಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗದ ಪ್ರಸ್ತಾಪ ಮಾಡಲಾಗಿದೆ. ಇದರ ಅಧ್ಯಕ್ಷರು ಪ್ರಧಾನಿ, ಉಪಾಧ್ಯಕ್ಷರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಆಗಿರುತ್ತಾರೆ. ಉಳಿದಂತೆ ರಾಜಕಾರಣಿಗಳು, ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಆಯೋಗದ ಅನುಮತಿ ಇಲ್ಲದೇ ಯಾವುದೇ ಶಿಕ್ಷಣ ಸಂಸ್ಥೆ ಆರಂಭಿಸಲು ಸಾಧ್ಯವಿಲ್ಲ. ಜತೆಗೆ ಶಿಕ್ಷಣ ಸಂಸ್ಥೆಗಳಿಗೆ ಮೆರಿಟ್ ನೀಡಲಾಗುತ್ತಿದೆ. ಆದರೆ, ಈ ಮೆರಿಟ್ ನೀಡುವವರ್ಯಾರು? ಹೇಗೆ ನೀಡುತ್ತಾರೆ? ಎಂದು ಗೊತ್ತೇ ಆಗುವುದಿಲ್ಲ. ಮೆರಿಟ್ ಮೇಲೆ ಅನುದಾನ ನೀಡಲಾಗುತ್ತಿದೆ. ಅಲ್ಲದೇ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಘಗಳ ಚುನಾವಣೆಗೂ ಅವಕಾಶ ನೀಡಿಲ್ಲ. ಒಟ್ಟಾರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಒಡಕು ಮೂಡಿಸಿ, ತಳಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ಆಯೋಗದಿಂದ ನಾಶ ಮಾಡುವ ಪ್ರಯತ್ನ ಮಾಡಲಾಗಿದ್ದು, ಇದರ ವಿರುದ್ದ ಹೋರಾಟ ಶುರು ಮಾಡಬೇಕಿದೆ ಎಂದರು.
ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಪ್ರೊ| ಎಸ್.ಪಿ. ಮೇಲಕೇರಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಟೀಲ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ. ಅಂಬರೀಶ, ಹಿರಿಯ ಮುಖಂಡ ಮಾರುತಿ ಮಾನ್ಪಡೆ, ಶರಣಬಸಪ್ಪ ಮಮಶೆಟ್ಟಿ, ಅಲ್ತಾಫ್ ಇನಾಮ್ದಾರ್, ಗುರುರಾಜ ದೇಸಾಯಿ, ಎಚ್.ಆರ್. ನವೀನ ಕುಮಾರ, ವಾಸುದೇವ ರೆಡ್ಡಿ, ಅಶೋಕ ಮ್ಯಾಗೇರಿ, ಸುದಾಮ ದನ್ನಿ ಇದ್ದರು.